ಲೌಸನ್ನೆ (ಸ್ವಿಟ್ಜರ್ಲೆಂಡ್):ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ಮತ್ತು ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಅವರು ಶುಕ್ರವಾರ ನಡೆದ ಲೌಸನ್ನೆ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ ಭರ್ಜರಿ ಪ್ರದರ್ಶನ ತೋರಿ ಎರಡನೇ ಸ್ಥಾನ ಪಡೆದರು. ತೊಡೆಸಂದು ಗಾಯದಿಂದ ಬಳಲುತ್ತಿದ್ದರೂ ಅತ್ಯುತ್ತಮ ಪ್ರದರ್ಶನ ನೀಡಿ ಋತುವಿನ ಅತ್ಯುತ್ತಮ 89.49 ಮೀಟರ್ ಎಸೆತವನ್ನು ದಾಖಲಿಸಿ ಎರಡನೇ ಸ್ಥಾನವನ್ನು ಪಡೆದರು.
ಪಂದ್ಯದ ಆರಂಭದಲ್ಲಿ ನಿರಾಸ ಪ್ರದರ್ಶನ ತೋರಿದ ನೀರಜ್ ಮೊದಲ ಸುತ್ತಿನಲ್ಲಿ 82.10 ಮೀಟರ್‌ಗಳ ದೂರಕ್ಕೆ ಭರ್ಜಿ ಎಸೆದು ನಾಲ್ಕನೇ ಸ್ಥಾನ ಪಡೆದರು. ಇದಾದ ಬಳಿಕ ಎರಡನೇ ಎಸೆತವನ್ನು 83.21 ಮೀಟರ್ ದೂರ ಎಸೆದು ಮೂರನೇ ಸ್ಥಾನ ಪಡೆದರು. ಮೂರನೇ ಸುತ್ತಿನಲ್ಲೂ ನೀರಜ್ ಚೋಪ್ರಾ 83.13 ಮೀಟರ್, ನಾಲ್ಕನೇ ಸುತ್ತಿನಲ್ಲಿ 82.34 ಮೀಟರ್ ದೂರ ಎಸೆದು ನಿರಾಸೆ ಅನುಭವಿಸಿದರು. 5ನೇ ಸುತ್ತಿನಲ್ಲಿ ಕೊಂಚ ಚೇತರಿಸಿಕೊಂಡು 85.58 ಮೀಟರ್ ದೂರ ಎಸೆದು ಮತ್ತೊಮ್ಮೆ ಅಗ್ರ 3ರಲ್ಲಿ ಸ್ಥಾನ ಪಡೆದರು. ಆರನೇ ಮತ್ತು ಅಂತಿಮ ಸುತ್ತಿನಲ್ಲಿ ಕಮ್ಬ್ಯಾಕ್ ಮಾಡಿ 89.49 ಮೀಟರ್‌ಗಳ ದೂರಕ್ಕೆ ಭರ್ಜಿ ಎಸೆದು ಈ ಋತುವಿನ ಅತ್ಯುತ್ತಮ ಎಸೆತ ದಾಖಲಿಸಿದರು. ಇದರೊಂದಿಗೆ ಎರಡನೇ ಸ್ಥಾನ ಪಡೆದ ಫೈನಲ್‌ಗೆ ಅರ್ಹತೆ ಪಡೆದರು.
ಗ್ರೆನಡಾಡ್ನ ಆ್ಯಂಡರ್ಸನ್ ಪೀಟರ್ಸ್ 90.61 ಮೀಟರ್ ದೂರಕ್ಕೆ ಭರ್ಜಿ ಎಸೆದು ಅಗ್ರ ಸ್ಥಾನ ಪಡೆದುಕೊಂಡರು. ಜತೆಗೆ ಕೂಟದ ದಾಖಲೆಯನ್ನು ಮುರಿದರು. ಈ ಎಸೆತದ ಮೂಲಕ ಅವರು 2015ರಲ್ಲಿ ಕೆಶೋರ್ನ್ ವಾಲ್ಕಾಟ್ ನಿರ್ಮಿಸಿದ್ದ 90.16 ಮೀಟರ್‌ಗಳ ಹಿಂದಿನ ದಾಖಲೆ ಮುರಿದರು.