ನವದೆಹಲಿ:ಭಾರತೀಯ ಕುಸ್ತಿ ಸಂಸ್ಥೆಯ (ಡಬ್ಲ್ಯೂಎಫ್ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಹೋರಾಟ ನಡೆಸಿದ್ದ, ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಮತ್ತೆ ಅಮಾನತು ಮಾಡಿ ಭಾನುವಾರ ಆದೇಶಿಸಿದೆ.
ಯಾವುದೇ ಎಚ್ಚರಿಕೆ ನೀಡದೇ ಕುಸ್ತಿಪಟು ಬಜರಂಗ್ ಪೂನಿಯಾರನ್ನು ಅಮಾನತು ಮಾಡಿದ ಕ್ರಮವನ್ನು ಡೋಪಿಂಗ್ ವಿರೋಧಿ ಶಿಸ್ತು ಸಮಿತಿ (ADDP) ಇತ್ತೀಚಿಗೆ ರದ್ದು ಮಾಡಿತ್ತು. ಇದರ ಬೆನ್ನಲ್ಲೇ, ಕುಸ್ತಿಪಟುವಿಗೆ ಅಧಿಕೃತ ನೋಟಿಸ್ ಜಾರಿ ಮಾಡಿ ಸಸ್ಪೆಂಡ್ ಆದೇಶ ಹೊರಡಿಸಿದೆ.
ಮಾರ್ಚ್ 10 ರಂದು ಸೋನೆಪತ್ನಲ್ಲಿ ನಡೆದ ಆಯ್ಕೆ ಟ್ರಯಲ್ಸ್ನಲ್ಲಿ ಡೋಪ್ ಪರೀಕ್ಷೆಗೆ ಮೂತ್ರದ ಮಾದರಿಯನ್ನು ನೀಡಲು ನಿರಾಕರಿಸಿದ್ದಕ್ಕಾಗಿ ತಾರಾ ಕುಸ್ತಿಪಟುವನ್ನು ನಾಡಾ ಏಪ್ರಿಲ್ 23 ರಂದು ಅಮಾನತುಗೊಳಿಸಿತ್ತು. ಇದನ್ನು ವಾಡಾ ಕೂಡ ಅಂಗೀಕರಿಸಿತ್ತು. ರಾಷ್ಟ್ರೀಯ ಉದ್ದೀಪನ ನಿರೋಧಕ ನಿಯಮಗಳ ಉಲ್ಲಂಘಿಸಿದ್ದು, ತಾತ್ಕಾಲಿಕವಾಗಿ ಕ್ರೀಡೆಯಿಂದ ಅಮಾನತುಗೊಳಿಸಲಾಗಿದೆ ಎಂದು ಬಜರಂಗ್ ಪೂನಿಯಾಗೆ ನಾಡಾ ಅಧಿಕಾರಿಗಳು ಔಪಚಾರಿಕ ಸೂಚನೆ ನೀಡಿದ್ದರು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಜುಲೈ 11ರ ವರೆಗೆ ಅವಕಾಶ ನೀಡಲಾಗಿದೆ.