ಹೈದರಾಬಾದ್:ನಾಳೆಯಿಂದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗಳು ಪ್ರಾರಂಭವಾಗಲಿವೆ. ಕರ್ನಾಟಕ ಸೇರಿ ಒಟ್ಟು 38 ತಂಡಗಳು ಭಾಗಿಯಾಗುತ್ತಿವೆ. ಈ ಟೂರ್ನಿಗೆ ಯುವ ಆಟಗಾರ ಪೃಥ್ವಿ ಶಾ ಅವರನ್ನು ಮುಂಬೈ ತಂಡಕ್ಕೆ ಆಯ್ಕೆ ಮಾಡದೇ ಇರುವುದರ ಕುರಿತು ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಇದೇ ವಿಚಾರವಾಗಿ ಯುವ ಬ್ಯಾಟರ್ ಶಾ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಇದರ ನಡುವೆಯೇ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಪೃಥ್ವಿ ಶಾ ಅವರನ್ನು ತಂಡಕ್ಕೆ ಆಯ್ಕೆ ಮಾಡದಿರುವುದರ ಬಗ್ಗೆ ಪ್ರತಿಕ್ರಿಯಿಸಿದೆ.
ಈ ಬಗ್ಗೆ ಪಿಟಿಐಗೆ ಪ್ರತಿಕ್ರಿಯೆ ನೀಡಿರುವ ಎಂಸಿಎ ಅಧಿಕಾರಿ, "ಪೃಥ್ವಿ ಶಾಗೆ ಹೊರಗಿನ ಶತ್ರುಗಳು ಯಾರೂ ಇಲ್ಲ. ಅವರು ತಮ್ಮ ಪಾಲಿಗೆ ತಾವೇ ಶತ್ರುವಾಗಿದ್ದಾರೆ. ನಿಜ ಹೇಳಬೇಕೆಂದರೆ ಇತ್ತೀಚೆಗೆ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ವೇಳೆ 10 ಜನರೊಂದಿಗೆ ಪಂದ್ಯ ಆಡಬೇಕಾಯ್ತು. ಅಲ್ಲದೇ ಪೃಥ್ವಿ ಶಾ ಫೀಲ್ಡಿಂಗ್ ಮಾಡುತ್ತಿದ್ದ ಕಡೆ ಚೆಂಡು ಹೋಗದಂತೆ ಕಷ್ಟಪಡಬೇಕಾಯ್ತು. ಏಕೆಂದರೆ ಅವನ ಬಳಿ ಚೆಂಡು ಹೋದರೆ, ಅದನ್ನು ತಡೆದು ಥ್ರೋ ಮಾಡುವಂತಹ ಫಿಟ್ನೆಸ್ ಅವನ ಬಳಿ ಇರಲಿಲ್ಲ. ಇಂತಹ ಫಿಟ್ನೆಸ್ನೊಂದಿಗೆ ಶಾ ಎಷ್ಟು ಪಂದ್ಯಗಳನ್ನು ಆಡಬಲ್ಲರು? ಬ್ಯಾಟಿಂಗ್ ಆಡುವಾಗಲೂ ಇಂತಹ ಹಲವಾರು ಘಟನೆಗಳು ಸಂಭವಿಸಿವೆ. ರನ್ ಕಸಿಯಲು ಪರದಾಡುತ್ತಿದ್ದರು. ಆತನ ಫಿಟ್ನೆಸ್, ಶಿಸ್ತು ಮತ್ತು ನಡವಳಿಕೆ ಕೂಡ ಉತ್ತಮವಾಗಿರಲಿಲ್ಲ. ಶಾ ವರ್ತನೆ ಬಗ್ಗೆ ತಂಡದಲ್ಲೂ ಹಿರಿಯರೂ ದೂರುತ್ತಿದ್ದರು" ಎಂದರು.
ಮುಂದುವರೆದು ಮಾತನಾಡಿದ ಅವರು, "ಇದಷ್ಟೇ ಅಲ್ಲದೇ, ಪಂದ್ಯಾವಳಿ ವೇಳೆ ಪೃಥ್ವಿ ಆಗಾಗ್ಗೆ ನೈಟ್ ಔಟ್ ಹೋಗುತ್ತಿದ್ದರು ಮತ್ತು ಬೆಳಿಗ್ಗೆ ಆರು ಗಂಟೆಗೆ ಹೋಟೆಲ್‌ಗೆ ವಾಪಸ್ ಆಗುತ್ತಿದ್ದರು. ಅಭ್ಯಾಸ ಪಂದ್ಯಗಳಲ್ಲೂ ಭಾಗಿಯಾಗುತ್ತಿರಲಿಲ್ಲ. ಇಂತಹ ವರ್ತನೆಯಿಂದ ತಂಡದಲ್ಲಿ ಸ್ಥಾನ ಪಡೆಯಬೇಕು ಎಂದು ಬಯಸುವುದು ಎಷ್ಟು ಸಮಂಜಸ" ಎಂದು ಅಧಿಕಾರಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.