ನವದೆಹಲಿ:ಭಾರತ ಕ್ರಿಕೆಟ್ ತಂಡದ ನೂತನ ಬೌಲಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮೊರ್ನೆ ಮೊರ್ಕೆಲ್ (39) ಆಯ್ಕೆಯಾಗಿದ್ದಾರೆ. ಈ ವಿಚಾರವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬುಧವಾರ ಖಚಿತಪಡಿಸಿದರು. ಮೋರ್ನೆ ಮೊರ್ಕೆಲ್ ಅವರನ್ನು ಹಿರಿಯ ಭಾರತೀಯ ಪುರುಷರ ತಂಡದ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೊರ್ಕೆಲ್ ಅವರು ಗೌತಮ್ ಗಂಭೀರ್ ಜೊತೆಗೆ ಲಕ್ನೋ ಸೂಪರ್‌ಜೈಂಟ್ಸ್ ತಂಡದ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದರು. 2022ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ(ಐಪಿಎಲ್) ಲಕ್ನೋ ಸೂಪರ್‌ಜೈಂಟ್ಸ್ ಅಸ್ತಿತ್ವಕ್ಕೆ ಬಂದಾಗ ಎರಡು ವರ್ಷಗಳ ಕಾಲ ಫ್ರ್ಯಾಂಚೈಸ್‌ನ ಮಾರ್ಗದರ್ಶಕರಾಗಿಯೂ ಮೊರ್ಕೆಲ್ ಕೆಲಸ ಮಾಡಿದ್ದರು. ಎರಡೂ ಸಂದರ್ಭಗಳಲ್ಲಿ ತಂಡ ಪ್ಲೇಆಫ್ ತಲುಪಿತ್ತು.
2023ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಮೊರ್ಕೆಲ್ ಕೆಲಸ ಮಾಡಿದ್ದರು. ಪಾಕ್ ಕ್ರಿಕೆಟ್ ಮಂಡಳಿಯೊಂದಿಗಿನ ಒಪ್ಪಂದದ ಅವಧಿ ಮುಗಿಯುವ ಕೆಲವು ತಿಂಗಳುಗಳ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಜುಲೈನಲ್ಲಿ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆದ ಬಳಿಕ ಇದೀಗ ತಂಡದಲ್ಲಿ ಬೌಲಿಂಗ್ ಕೋಚ್ ಕೊರತೆ ನೀಗಿದೆ. ಮೋರ್ನೆ ಮೊರ್ಕೆಲ್ ಅಧಿಕಾರಾವಧಿ ಸೆಪ್ಟೆಂಬರ್ 1ರಿಂದ ಪ್ರಾರಂಭವಾಗಲಿದೆ. ಈ ಹಿಂದೆ ಗಂಭೀರ್ ಅವರನ್ನು 2027ರ ವರೆಗೆ ಟೀಮ್ ಇಂಡಿಯಾದ ಕೋಚ್ ಆಗಿ ನೇಮಿಸಲಾಗಿತ್ತು. ಗಂಭೀರ್ ಮುಖ್ಯ ಕೋಚ್ ಆದ ನಂತರ, ಅವರ ಆಯ್ಕೆಯ ಅನೇಕ ಕೋಚ್‌ಗಳು ತಂಡದಲ್ಲಿ ಸಹಾಯಕ ಸಿಬ್ಬಂದಿಯಾಗಿ ಸ್ಥಾನ ಪಡೆದಿದ್ದಾರೆ.
ಬೌಲಿಂಗ್ ಕೋಚ್‌ಗಾಗಿ ಜಹೀರ್ ಖಾನ್, ಲಕ್ಷ್ಮೀಪತಿ ಬಾಲಾಜಿ ಮತ್ತು ವಿನಯ್ ಕುಮಾರ್ ಅವರ ಹೆಸರುಗಳು ಚರ್ಚೆಗೆ ಬಂದಿದ್ದವು. ಇದಕ್ಕೂ ಮುನ್ನ ಅಭಿಷೇಕ್ ನಾಯರ್ ಮತ್ತು ರಿಯಾನ್ ಟೆನ್ ದೋಸ್ಚೇಟ್ ಅವರು ಸಹಾಯಕ ಸಿಬ್ಬಂದಿಯಾಗಿ ತಂಡದಲ್ಲಿ ಸ್ಥಾನ ಪಡೆದಿದ್ದರು. ಇಬ್ಬರೂ ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ಗಂಭೀರ್ ಜೊತೆ ಕೆಲಸ ಮಾಡಿದ್ದಾರೆ. ಫೀಲ್ಡಿಂಗ್ ಕೋಚ್ ಆಗಿ ಟಿ.ದಿಲೀಪ್ ಅವರ ಅಧಿಕಾರಾವಧಿಯನ್ನು ವಿಸ್ತರಿಸಲಾಯಿತು.
ಮೊರ್ನೆ ಮೊರ್ಕೆಲ್ 86 ಟೆಸ್ಟ್, 144 ಏಕದಿನ ಮತ್ತು 44 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 160 ಇನ್ನಿಂಗ್ಸ್ ಮೂಲಕ 309 ವಿಕೆಟ್‌ಗಳನ್ನು ಪಡೆದರೆ, ಏಕದಿನದಲ್ಲಿ 188 ಮತ್ತು ಟಿ20ಯಲ್ಲಿ 47 ವಿಕೆಟ್ ಪಡೆದಿದ್ದಾರೆ. ಇದಲ್ಲದೆ, ಬ್ಯಾಟಿಂಗ್‌ನಲ್ಲಿಯೂ ಎಲ್ಲಾ ಸ್ವರೂಪಗಳಲ್ಲಿ 1,234 ರನ್‌ಗಳನ್ನು ಗಳಿಸಿದ್ದಾರೆ. ಇದೀಗ ಭಾರತೀಯ ತಂಡದ ಬೌಲಿಂಗ್ ಕೋಚ್ ಆದ ನಂತರ, ಅವರು ಇನ್ನು ಮುಂದೆ ಲಕ್ನೋ ಸೂಪರ್‌ಜೈಂಟ್ಸ್‌ಗೆ ತಮ್ಮ ಸೇವೆ ಒದಗಿಸಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ:ಸವಾಲುಗಳ ನಡುವೆ ಕಬಡ್ಡಿಯಲ್ಲಿ ಸಾಧಿಸುವ ಛಲ: ಬೆಂಗಳೂರು ಬುಲ್ಸ್ ತಂಡಕ್ಕೆ ದಾವಣಗೆರೆ ಯುವಕ ಆಯ್ಕೆ - BENGALURU BULLS