ಹೈದರಾಬಾದ್:ಮುಂಬರುವ ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ತಂಡ ಪ್ರಕಟಗೊಂಡಿದ್ದು, ಟೀಂನಲ್ಲಿ ಸ್ಥಾನ ಪಡೆಯದ ಬಗ್ಗೆ ಸ್ಟಾರ್ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ ಮೌನ ಮುರಿದಿದ್ದಾರೆ.
2023ರ ನವೆಂಬರ್‌ನಲ್ಲಿ ತವರಿನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಪಾದದ ಗಾಯದ ಬಳಿಕ ಶಮಿ ಕ್ರಿಕೆಟ್ ಮೈದಾನದಿಂದ ಹೊರಗುಳಿದಿದ್ದಾರೆ. ಫೆಬ್ರವರಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಸಹ, ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ, ಕಾರ್ಯಕ್ರಮವೊಂದರಲ್ಲಿ ಗಾಯದ ಬಗ್ಗೆ ಪ್ರತಿಕ್ರಿಯಿಸಿದ್ದ ಶಮಿ, ಸದ್ಯ ನೋವು ಕಂಡುಬರುತ್ತಿಲ್ಲ ಎಂದು ಹೇಳಿದ್ದರು. ಇದಕ್ಕೂ ಕೆಲ ದಿನಗಳ ಹಿಂದೆ, ಭಾರತೀಯ ನಾಯಕ ರೋಹಿತ್ ಶರ್ಮಾ ಈ ತಿಂಗಳ ಆರಂಭದಲ್ಲಿ ಎನ್‌ಸಿಎಯಲ್ಲಿ ಅಭ್ಯಾಸದ ವೇಳೆ ಮೊಣಕಾಲು ಊದಿಕೊಂಡಿದೆ ಎಂಬುದನ್ನು ಬಹಿರಂಗಪಡಿಸಿದ್ದರು. ಬಹುಶಃ ಇದೇ ಕಾರಣದಿಂದ ಮುನ್ನೆಚ್ಚರಿಕೆಯಾಗಿ, ಬಿಸಿಸಿಐ ಅವರನ್ನು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಇನ್ನೂ ಪರಿಗಣಿಸಿಲ್ಲ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿಲ್ಲ ಎನ್ನಲಾಗುತ್ತಿದೆ.
ಬಿಸಿಸಿಐ, ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ಶಮಿ:ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡ ಪ್ರಕಟಗೊಂಡ ಒಂದು ದಿನದ ನಂತರ, ಶಮಿ ತಮ್ಮ ಚೇತರಿಕೆಯ ಪ್ರಕ್ರಿಯೆಯನ್ನು ತೋರ್ಪಡಿಸುವ ಮತ್ತೊಂದು ವಿಡಿಯೋ ಪೋಸ್ಟ್ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ, ಬಿಸಿಸಿಐ ಹಾಗೂ ಅಭಿಮಾನಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಲಭ್ಯರಾಗದ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ಶೀಘ್ರವೇ ಹಿಂದಿರುಗುವ ಭರವಸೆ ನೀಡಿದ್ದಾರೆ.