ಮುಂಬೈ(ಮಹಾರಾಷ್ಟ್ರ): ಟಿ-20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಭವ್ಯ ಮೆರವಣಿಗೆ ಗುರುವಾರ ಸಂಜೆ ಮುಂಬೈ ನಗರಿಯ ಅರಬ್ಬೀ ಸಮುದ್ರ ತೀರದ ಮರೀನ್ ಡ್ರೈವ್ನಲ್ಲಿ ಅದ್ಧೂರಿಯಾಗಿ ನಡೆಯಿತು. ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಹಲವರು ಗಾಯಗೊಂಡಿದ್ದಾರೆ. ಕೆಲವರು ಉಸಿರಾಟದ ತೊಂದರೆ ಅನುಭವಿಸಿದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿ ರವಿ ಸೋಲಂಕಿ ಎಂಬವರು ಮಾತನಾಡಿ, "ನಾನು ಕಚೇರಿಯಿಂದ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದೆ. ಈ ವೇಳೆ ಭಾರತ ಕ್ರಿಕೆಟ್ ತಂಡದ ಆಟಗಾರರು ಸಂಜೆ 5-6 ಗಂಟೆಯ ವೇಳೆಗೆ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಯಿತು. ಆದರೆ, ನಿಗದಿತ ಸಮಯಕ್ಕೆ ಮೆರವಣಿಗೆ ಆರಂಭವಾಗಲಿಲ್ಲ. ಜನಸಂದಣಿ ಮಾತ್ರ ಹೆಚ್ಚುತ್ತಲೇ ಇತ್ತು. ದೊಡ್ಡ ಸಂಖ್ಯೆಯಲ್ಲಿ ಪೊಲೀಸರಿದ್ದರೂ ಪರಿಸ್ಥಿತಿಯನ್ನು ನಿಭಾಯಿಸುತ್ತಿರಲಿಲ್ಲ. ನೂಕುನುಗ್ಗಲಿನಲ್ಲಿ ಒಬ್ಬರ ಮೇಲೊಬ್ಬರು ಬೀಳುತ್ತಿದ್ದರು. ಜನರು ಜೋರಾಗಿ ಕಿರುಚುತ್ತಿದ್ದರು" ಎಂದರು.
ವಿಜಯೋತ್ಸವ ಮೆರವಣಿಗೆ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಸಂತ್ರಸ್ತ ರಿಷಬ್ ಮಹೇಶ್ ಯಾದವ್ ಮಾತನಾಡಿ, "ಜನರ ಮಧ್ಯೆ ಸಿಲುಕಿ ನನಗೆ ಉಸಿರುಗಟ್ಟಿದಂತಾಯಿತು. ನಾನು ಪ್ರಜ್ಞೆ ಕಳೆದುಕೊಂಡು ಬಿದ್ದೆ. ನನ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಚಿಕಿತ್ಸೆ ಪಡೆದು ಈಗ ಚೇತರಿಸಿಕೊಂಡಿದ್ದೇನೆ. ಅಗತ್ಯಕ್ಕಿಂತ ಹೆಚ್ಚು ಜನಸಂದಣಿ ಇತ್ತು. ನಿರ್ವಹಣೆ ಸರಿಯಾಗಿರಲಿಲ್ಲ. ಪೊಲೀಸರೂ ಎಚ್ಚೆತ್ತುಕೊಂಡಿರಲಿಲ್ಲ. ಹಾಗಾಗಿ ಸಮಸ್ಯೆಯಾಯಿತು" ಎಂದು ವಿವರಿಸಿದರು.