ಹೈದರಾಬಾದ್: ಪ್ರತಿ ವರ್ಷ, ಭಾರತ ಸರ್ಕಾರವು ಕ್ರೀಡಾಪಟುಗಳ ಸಾಧನೆಗಳನ್ನು ಗುರುತಿಸಲು ಪ್ರತಿಷ್ಠಿತ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡುತ್ತದೆ.
ಈ ಬಾರಿಯೂ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಕೆಲ ಹೆಸರುಗಳನ್ನು ಬಹಿರಂಗಪಡಿಸಲಾಗಿದೆ. ಭಾರತದ ಪುರುಷರ ಹಾಕಿ ತಂಡದ ನಾಯಕ ಮತ್ತು ಅನುಭವಿ ಡ್ರ್ಯಾಗ್-ಫ್ಲಿಕ್ಕರ್ ಹರ್ಮನ್‌ಪ್ರೀತ್ ಸಿಂಗ್ ಅವರ ಹೆಸರನ್ನು ಭಾರತದ ಅತಿದೊಡ್ಡ ಕ್ರೀಡಾ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದಲ್ಲಿ ಭಾರತ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿತು. ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್ ಅವರ ಹೆಸರನ್ನೂ ಖೇಲ್ ರತ್ನ ಪ್ರಶಸ್ತಿಗೆ ಪ್ರಸ್ತಾಪಿಸಲಾಗಿದೆ. ಪ್ರವೀಣ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಏಷ್ಯನ್ ದಾಖಲೆಯೊಂದಿಗೆ ಟಿ- 64 ವರ್ಗ ಪುರುಷರ ಹೈಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಆದರೆ, ಖೇಲ್ ರತ್ನ ಪ್ರಶಸ್ತಿಗೆ ಪ್ರಸ್ತಾಪಿಸಲಾದ ಹೆಸರುಗಳಲ್ಲಿ ಭಾರತದ ಶೂಟರ್ ಮನು ಭಾಕರ್ ಅವರ ಹೆಸರನ್ನು ಸೇರಿಸಲಾಗಿಲ್ಲ. ಮನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು. ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಮನು ಭಾಕರ್ ಅವರು ಪ್ರಶಸ್ತಿಗೆ ಅರ್ಜಿ ಸಲ್ಲಿಸಿಲ್ಲ ಎಂದು ಕ್ರೀಡಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದೆ. ಆದರೆ, ಮನು ಕುಟುಂಬವು ಅರ್ಜಿ ಸಲ್ಲಿಸಿರುವುದಾಗಿ ಹೇಳಿದೆ.