ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎರಡು ಪದಕ ಗೆದ್ದ ಭಾರತದ ಮಹಿಳಾ ಶೂಟರ್ ಮನು ಭಾಕರ್ ಅವರ ಬ್ರ್ಯಾಂಡ್ ಮೌಲ್ಯ ಗಣನೀಯವಾಗಿ ಹೆಚ್ಚಾಗಿದೆ. ಹಲವು ಪ್ರಸಿದ್ಧ ಬ್ರ್ಯಾಂಡ್‌ಗಳು ಮನು ಅವರನ್ನು ತಮ್ಮ ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಳ್ಳಲು ಸಂಪರ್ಕಿಸಿವೆ ಎಂಬ ಮಾಹಿತಿ ದೊರೆತಿದೆ. ಅವಳಿ ಪದಕ ಸಾಧನೆಯ ಬೆನ್ನಲ್ಲೇ 40ಕ್ಕೂ ಅಧಿಕ ಪ್ರಸಿದ್ಧ ಬ್ರ್ಯಾಂಡ್‌ಗಳು ಜಾಹೀರಾತು ಒಪ್ಪಂದಗಳಿಗಾಗಿ ಸಂಪರ್ಕಿಸಿವೆ ಎಂದು ವರದಿಯಾಗಿದೆ.
ಮನು ಈ ಹಿಂದೆಯೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದರು. ಉತ್ತಮ ಕ್ರೀಡಾಪಟುವಾಗಿದ್ದರಿಂದಾಗಿ ಹಲವು ಕಂಪನಿಗಳು ಅವರನ್ನು ಹುಡುಕಿಕೊಂಡು ಬಂದಿವೆ.
ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ಗೆ ಹೋಗುವವರೆಗೆ ಅವರು ತಾವು ನಟಿಸಿರುವ ಪ್ರತಿ ಜಾಹೀರಾತುಗಳಿಗಾಗಿ 20 ಲಕ್ಷ ರೂ.ಗಳಿಂದ 25 ಲಕ್ಷ ರೂ.ಗಳ ಸಂಭಾವನೆ ಪಡೆಯುತ್ತಿದ್ದರು. ಆದರೆ ಇದೀಗ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗೆದ್ದ ನಂತರ ಸಂಭಾವನೆ ಹೆಚ್ಚಾಗಿದೆ. ಈಗಾಗಲೇ 40 ಕಂಪನಿಗಳು ಮನು ಅವರನ್ನು ತಮ್ಮ ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಳ್ಳಲು ಸಂಪರ್ಕಿಸಿವೆ ಎಂದು ಐಒಎಸ್ ಸ್ಟೋರ್ಸ್ ಮತ್ತು ಎಂಟರ್‌ಟೈನ್‌ಮೆಂಟ್‌ನ ಸಿಇಒ ನೀರವ್ ತೋಮರ್ ತಿಳಿಸಿದ್ದಾರೆ.
ಮನು ಅವರ ಎಲ್ಲಾ ಜಾಹೀರಾತುಗಳು, ಜಾಹೀರಾತು ಚಿತ್ರೀಕರಣದ ಶೆಡ್ಯೂಲಿಂಗ್ಗಳು ಹಾಗೂ ಆ ಮೂಲಕದ ಆದಾಯ ಸೇರಿ ಇವೆಲ್ಲವನ್ನೂ ಆ ಸಂಸ್ಥೆಯೇ ನೋಡಿಕೊಳ್ಳುತ್ತಿದೆ. ಕಂಪನಿಯ ಸಿಇಒ ನೀರವ್ ತೋಮರ್, ಮನು ಅವರ ಇತ್ತೀಚಿನ ಸಂಭಾವನೆ ವಿಚಾರವಾಗಿ ಹೇಳಿಕೆ ನೀಡಿದ್ದಾರೆ.
''ಕೇವಲ ಎರಡು ಮೂರು ದಿನಗಳಲ್ಲಿ ಮನು ಅವರ ಕಾಲ್ ಶೀಟ್ ಕೇಳಿಕೊಂಡು ಸುಮಾರು 40 ಕಂಪನಿಗಳು ಸಂಪರ್ಕಿಸಿವೆ. ಆದರೆ, ಯಾವುದನ್ನೂ ಫೈನಲ್ ಮಾಡಿಲ್ಲ. ಸದ್ಯದಲ್ಲೇ ಮನು ಅವರೊಂದಿಗೆ ಚರ್ಚಿಸಿ ಫೈನಲ್ ಮಾಡಲಾಗುತ್ತದೆ. ಸದ್ಯಕ್ಕೆ ಇನ್ನೂ ಮಾತುಕತೆ ನಡೆಸಲಾಗುತ್ತಿದೆ'' ಎಂದು ಅವರು ತಿಳಿಸಿದರು.
ಮನು ಬ್ರ್ಯಾಂಡ್ ವ್ಯಾಲ್ಯೂ ಆರು ಪಟ್ಟು ಹೆಚ್ಚಳ:ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜೋಡಿ ಪದಕ ಗೆದ್ದ ನಂತರ ಮನು ಭಾಕರ್ ಅವರ ಬ್ರಾಂಡ್ ವ್ಯಾಲ್ಯೂ ಸುಮಾರು ಐದರಿಂದ ಆರು ಪಟ್ಟು ಹೆಚ್ಚಾಗಿದೆ ಎನ್ನಲಾಗುತ್ತಿದೆ. ಈ ಮೊದಲು 20ರಿಂದ 25 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದ ಮನು ಭಾಕರ್ ಅವರ ಬ್ರಾಂಡ್ ವ್ಯಾಲ್ಯೂ ಈಗ 1.5 ಕೋಟಿ ರೂ. ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮನು ಈ ಹಿಂದೆ ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದರು.