ಬೆಂಗಳೂರು :ಚೇಸಿಂಗ್ ವೇಳೆ ನನ್ನನ್ನು ಫಿನಿಶರ್ ಆಗಿ ಬಳಸಿಕೊಳ್ಳಲಾಗುವುದು ಪಂದ್ಯಕ್ಕೂ ಹಿಂದಿನ ದಿನ ರಾತ್ರಿ ಟೀಮ್ ಮ್ಯಾನೇಜ್‌ಮೆಂಟ್ ನನಗೆ ಹೇಳಿತ್ತು. ಹಾಗಾಗಿ ಅದಕ್ಕೆ ತಕ್ಕಂತೆ ನಾನು ತಯಾರಿ ಆರಂಭಿಸಿದ್ದೆ ಎಂದು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದಿದ್ದ ಮಹಿಪಾಲ್ ಲೊಮ್ರೋರ್ ಬಹಿರಂಗಪಡಿಸಿದ್ದಾರೆ.
17ನೇ ಐಪಿಎಲ್ ಋತುವಿನಲ್ಲಿ ಸೋಮವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಆರ್‌ಸಿಬಿಯ ಮೊದಲ ಹೋಮ್ ಗೇಮ್‌ನಲ್ಲಿ ದಿನೇಶ್ ಕಾರ್ತಿಕ್ ಜೊತೆಗೂಡಿ ಕೇವಲ 8 ಎಸೆತಗಳಲ್ಲಿ ಅಜೇಯ 17 ರನ್ ಗಳನ್ನು ಮಹಿಪಾಲ್ ಬಾರಿಸುವ ಮೂಲಕ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪಂದ್ಯದ ಬಳಿಕ ಮಾತನಾಡಿದ ಮಹಿಪಾಲ್, ಫಿನಿಶರ್ ಪಾತ್ರಕ್ಕಾಗಿ ನಾನು ತಯಾರಿ ನಡೆಸಬೇಕೆಂದು ಟೀಮ್ ಮ್ಯಾನೇಜ್‌ಮೆಂಟ್ ಬಯಸಿತ್ತು. ಈ ಬಗ್ಗೆ ನನಗೆ ಮುಂಚಿತವಾಗಿಯೇ ತಿಳಿಸಲಾಗಿತ್ತು. ಯಾಕೆಂದರೆ ನಾವು ಉತ್ತಮ, ಬಲವಾದ ಬ್ಯಾಟಿಂಗ್ ಲೈನ್ ಅಪ್ ಹೊಂದಿದ್ದೇವೆ. ಹಾಗಾಗಿ ತಂಡವು ನನ್ನನ್ನು ಬಳಸಬಹುದಾದ ಕ್ರಮಾಂಕ ಇದಾಗಿದೆ. ಮೊದಲ ದಿನದಿಂದಲೇ ಅದರ ಬಗ್ಗೆ ಮ್ಯಾನೇಜ್‌ಮೆಂಟ್ ಸ್ಪಷ್ಟವಾಗಿದೆ. ನಾನು ಕೂಡ ಅದಕ್ಕಾಗಿ ತಯಾರಿ ನಡೆಸುತ್ತಿದ್ದೇನೆ ಎಂದು ಅವರು ಹೇಳಿದರು.
ಇಂಪ್ಯಾಕ್ಟ್ ಪ್ಲೇಯರ್ ಆಗಿ ತನ್ನ ಪಾತ್ರದ ಬಗ್ಗೆ ಮತ್ತಷ್ಟು ಮಾತನಾಡುತ್ತಾ, ''ಇಂಪ್ಯಾಕ್ಟ್ ಪ್ಲೇಯರ್ ನಿಯಮ ಇರುವುದರಿಂದ ನಮಗೆ ಯಾವುದೇ ಸಮಯದಲ್ಲಿ ಕರೆ ಬರಬಹುದು. ನಾವು ಸಿದ್ಧರಿರಬೇಕಾಗುತ್ತದೆ. ಆಟದ ಮೇಲೆ ಪ್ರಭಾವ ಬೀರಬೇಕು. ಪಂದ್ಯಕ್ಕೂ ಹಿಂದಿನ ರಾತ್ರಿ ಈ ಬಗ್ಗೆ ಮ್ಯಾನೇಜ್‌ಮೆಂಟ್ 'ನಾವು ಚೇಸ್ ಮಾಡಬೇಕಾದಲ್ಲಿ ನಿನ್ನನ್ನ ಕೆಳಕ್ರಮಾಂಕದಲ್ಲಿ ಬಳಸಿಕೊಳ್ಳಬಹುದು, ಸಿದ್ಧವಾಗಿರು' ಎಂದು ಸೂಚಿಸಿತ್ತು. ಹಾಗಾಗಿ ಮಾನಸಿಕವಾಗಿ ನಾನು ಸಿದ್ಧನಾಗಿದ್ದೆ ಮತ್ತು ಆ ಪಾತ್ರ ನಿರ್ವಹಿಸಿದೆ'' ಎಂದು ಲೋಮ್ರೋರ್ ತಿಳಿಸಿದರು.
ಕಳೆದ ಕೆಲವು ವರ್ಷಗಳಲ್ಲಿ ನಾನು ನಿರ್ವಹಿಸಿದ ಪಾತ್ರವು ನನಗೆ ಬ್ಯಾಟ್ ಮಾಡಲು ಹೆಚ್ಚಿನ ಎಸೆತಗಳನ್ನು ನೀಡುತ್ತಿತ್ತು. ಆದರೆ, ಈಗ ಇಂಪ್ಯಾಕ್ಟ್ ಆಟಗಾರನಾಗಿ ಅಥವಾ ಕೆಳ ಕ್ರಮಾಂಕದಲ್ಲಿ ಆಡುವಾಗ ಹೆಚ್ಚಿನ ಎಸೆತಗಳು ಸಿಗುವುದಿಲ್ಲ. ಆದ್ದರಿಂದ ನನ್ನ ಸಿದ್ಧತೆಗಳು ಎಷ್ಟರಮಟ್ಟಿಗೆ ಎಂದರೆ ನಾನು ನೆಟ್ಸ್‌ಗೆ ಹೋದಾಗ ಅಥವಾ ತರಬೇತಿ ಪಡೆಯುವಾಗ ಮೊದಲ ಎಸೆತದಿಂದಲೇ ಬೌಂಡರಿ ಬಾರಿಸಲು ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ.