ಹೈದರಾಬಾದ್ (ತೆಲಂಗಾಣ): 2024ರ ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಸಾಮಾನ್ಯ ಜನರೊಂದಿಗೆ ಭಾರತೀಯ ಕ್ರೀಡಾ ತಾರೆಯರು ಕೂಡ ತಮ್ಮ ಮನೆಯಿಂದ ಹೊರಬಂದು ಮತ ಚಲಾಯಿಸಿದರು. ಭಾರತದ ಶಟ್ಲರ್ ಜ್ವಾಲಾ ಗುಟ್ಟಾ ಅವರು ಹೈದರಾಬಾದ್‌ನ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಇದರೊಂದಿಗೆ ಮನೆಯಿಂದ ಹೊರಗೆ ಬಂದು ಮತದಾನ ಮಾಡುವಂತೆ ಮನವಿ ಮಾಡಿದರು.
ಮತದಾನ ಮಾಡಿದ ಬಳಿಕ ಮಾತನಾಡಿದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ, ಮತದಾನ ನಮ್ಮ ಹಕ್ಕು. ಜನರು ಬಂದು ಮತ ಹಾಕಬೇಕು. ನಾವು ನಿಮ್ಮನ್ನು ಅಧಿಕಾರಕ್ಕೆ ತರಬಹುದು ಮತ್ತು ನೀವು ಸರಿಯಾದ ಕೆಲಸ ಮಾಡದಿದ್ದರೆ ದೇಶ ಮತ್ತು ಸಮಾಜವು ನಿಮ್ಮನ್ನು ಕೆಳಗಿಳಿಸಬಹುದು ಎಂಬ ಸಂದೇಶವೂ ಇದು ಅಧಿಕಾರದಲ್ಲಿರುವ ಜನರಿಗೆ ಮುಟ್ಟುತ್ತದೆ ಎಂದರು.
ಇದಲ್ಲದೇ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕುಟುಂಬ ಕೂಡ ಹೈದರಾಬಾದ್‌ನಲ್ಲಿ ಮತದಾನ ಮಾಡಿದೆ. ಅವರ ತಂದೆ, ಮತದಾನ ಕೇವಲ ಹಕ್ಕು ಮಾತ್ರವಲ್ಲ ಕರ್ತವ್ಯವೂ ಹೌದು. ದೇಶದ ಅಭಿವೃದ್ಧಿಯಲ್ಲಿ ಜನರು ಪಾಲ್ಗೊಳ್ಳಬೇಕು ಮತ್ತು ಇದು ಮತದಾನದಿಂದ ಮಾತ್ರ ಸಾಧ್ಯ ಎಂಬ ಸಂದೇಶ ನೀಡಿದರು.