ನವದೆಹಲಿ:ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ ಸೆಪ್ಟೆಂಬರ್ 19 ರಿಂದ 23 ರಂದು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಬ್ ಪಂತ್ ಅವರಂತಹ 'ಬಿಗ್ಮ್ಯಾಚರ್'ಗಳು ತಂಡಕ್ಕೆ ವಾಪಸ್ ಆಗಿದ್ದು, ಕಿರಿಯ ಆಟಗಾರರು ಸ್ಥಾನ ತೆರವು ಮಾಡಬೇಕಾಗಿದೆ.
ಮೊದಲ ಪಂದ್ಯಕ್ಕೆ ಇನ್ನೂ 7 ದಿನ ಬಾಕಿ ಉಳಿದಿದೆ. ಟೆಸ್ಟ್ ಋತುವಿನ ಮೊದಲ ಸರಣಿಯಲ್ಲಿ ಪ್ಲೇಯಿಂಗ್ 11 ಬಗ್ಗೆ ಚರ್ಚೆಗಳು ನಡೆದಿದ್ದು, ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಅವರು ತಂಡದಲ್ಲಿ ಆಡುವ ಹನ್ನೊಂದು ಜನರನ್ನು ಪಟ್ಟಿ ಮಾಡಿದ್ದಾರೆ. ಅದರಲ್ಲಿ ಭರವಸೆಯ ಆಟಗಾರರಾದ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಅವರನ್ನು ಕೈಬಿಡಲಾಗಿದೆ. ಇದಕ್ಕೆ ಅವರು ಕಾರಣಗಳನ್ನೂ ನೀಡಿದ್ದಾರೆ.
ಖಾನ್, ಜುರೆಲ್ಗಿಲ್ಲ ಅವಕಾಶ:ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಕೃಷ್ಣಮಾಚಾರಿ ಶ್ರೀಕಾಂತ್ ಅವರು, ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಮೊದಲ ಟೆಸ್ಟ್ನಲ್ಲಿ ಆಡುವುದು ಅನುಮಾನವಿದೆ. ಕ್ಲಾಸಿಕ್ ಆಟಗಾರ ಕೆಎಲ್ ರಾಹುಲ್ ಪುನರಾಗಮನ ಪಡೆದಿದ್ದಾರೆ. ಅವರಿಗಾಗಿ ಸರ್ಫರಾಜ್ ಖಾನ್ ಸ್ಥಾನ ಬಿಟ್ಟುಕೊಡಬೇಕಾಗಿದೆ. ಇನ್ನೊಂದೆಡೆ ಜುರೆಲ್ ಜಾಗಕ್ಕೆ ಬಿಗ್ ಹಿಟ್ಟರ್ ರಿಷಭ್ ಪಂತ್ ಬರಲಿದ್ದಾರೆ. ಹೀಗಾಗಿ ಇಬ್ಬರು ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟ ಎಂದು ಹೇಳಿದ್ದಾರೆ.