ಕೋಲ್ಕತ್ತಾ, ಪಶ್ಚಿಮ ಬಂಗಾಳ: ನಿನ್ನೆ ನಡೆದ ಐಪಿಎಲ್ನ 47ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಕೆಕೆಆರ್ 16.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 157 ರನ್ ಕಲೆಹಾಕಿ ಗೆಲುವಿನ ನಗೆ ಬೀರಿತು. ಕೆಕೆಆರ್ ಪರ ಫಿಲ್ ಸಾಲ್ಟ್ ಬಿರುಸಿನ ಇನ್ನಿಂಗ್ಸ್ ಆಡಿದರು. 33 ಎಸೆತಗಳಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 68 ರನ್ ಚಚ್ಚಿದರು. ಸುನಿಲ್ ನರೈನ್ (10)ಯೊಂದಿಗೆ ಮೊದಲ ವಿಕೆಟ್‌ಗೆ 79 ರನ್ ಸೇರಿಸಿ ಭದ್ರ ಬುನಾದಿ ಹಾಕಿದರು. ಅಕ್ಷರ್ ಪಟೇಲ್ ಏಳನೇ ಓವರ್‌ನಲ್ಲಿ ನರೈನ್ ಮತ್ತು ಒಂಬತ್ತನೇ ಓವರ್‌ನಲ್ಲಿ ಸಾಲ್ಟ್ ಅವರನ್ನು ಔಟ್ ಮಾಡಿದರು. ರಿಂಕು ಸಿಂಗ್ (11) ಕೂಡ ಬಹು ಬೇಗ ವಿಕೆಟ್ ಕಳೆದುಕೊಂಡರು.
ಬಳಿಕ ನಾಯಕ ಶ್ರೇಯಸ್ ಅಯ್ಯರ್ ಮತ್ತು ವೆಂಕಟೇಶ್ ಅಯ್ಯರ್ ನಾಲ್ಕನೇ ವಿಕೆಟ್‌ಗೆ 57 ರನ್‌ಗಳ ಜೊತೆಯಾಟ ಆಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ 6ನೇ ಗೆಲವಿನೊಂದಿಗೆ ಕೆಕೆಆರ್ 2ನೇ ಸ್ಥಾನವನ್ನು ಭದ್ರವಾಗಿರಿಸಿಕೊಂಡಿದೆ. ಡೆಲ್ಲಿ ಪರ ಅಕ್ಷರ್ ಪಟೇಲ್ 2, ವಿಲಿಯಮ್ಸ್ ಲಿಜಾದ್ ಒಂದು ವಿಕೆಟ್ ಪಡೆದರು.