ಹುಬ್ಬಳ್ಳಿ: ವಿಮಾನದಲ್ಲಿ ಪ್ರಯಾಣಿಸಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಅದರಂತೆ ತಾವೂ ವಿಮಾನದಲ್ಲಿ ಪ್ರಯಾಣಿಸಬೇಕು ಎಂದು ವಿದ್ಯಾರ್ಥಿಗಳು ಕಂಡಿದ್ದ ಕನಸನ್ನು ರೌಂಡ್ ಟೇಬಲ್ ಸಂಸ್ಥೆ ನನಸು ಮಾಡಿದೆ. ಹುಬ್ಬಳ್ಳಿಯ ರೌಂಡ್ ಟೇಬಲ್ ಇಂಡಿಯಾ ಮತ್ತು ಲೇಡಿಸ್ ಸರ್ಕಲ್ ಇಂಡಿಯಾ ಸಪ್ನೋಕಿ ಉಡಾನ್ ಫ್ಲೈಟ್ ಆಫ್ ಫ್ಯಾಂಟಸಿ ಕಾರ್ಯಕ್ರಮದ ಮೂಲಕದ ಹುಬ್ಬಳ್ಳಿಯ ಉಣಕಲ್ನ ಆಶ್ರಯ ಕಾಲೋನಿಯ ಜೆಹೆಚ್ಪಿಎಸ್ ಸರ್ಕಾರಿ ಶಾಲೆಯ 6 ಮತ್ತು 7ನೇ ತರಗತಿಯ 16 ವಿದ್ಯಾರ್ಥಿಗಳು, ನಾಲ್ಕು ಶಿಕ್ಷಕರಿಗೆ ವಿಮಾನ ಪ್ರವಾಸ ಮಾಡಿಸಿದೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಂದು ಬೆಳಗ್ಗೆ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ಇವರು ಬೆಂಗಳೂರಿನ ವಿಧಾನಸೌಧ, ಹೈಕೋರ್ಟ್, ವಿಶ್ವೇಶ್ವರಯ್ಯ ಮ್ಯೂಸಿಯಂ, ನೆಹರು ತಾರಾಲಯ, ಬನ್ನೇರುಘಟ್ಟ ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ.
ಮಕ್ಕಳಿಗೆ ವಿಮಾನ ಪ್ರಯಾಣದ ಅನುಭವ: ರೌಂಡ್ ಟೇಬಲ್ ಇಂಡಿಯಾ ಚೇರ್ಮನ್ ಅರ್ಜುನ ಮಹಾಜನ್ ಮಾತನಾಡಿ, "ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಎಲ್ಲವನ್ನೂ ತೋರಿಸಬೇಕು. ಕಲಿಕೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಮಕ್ಕಳನ್ನು ವಿಮಾನದಲ್ಲಿ ಪ್ರವಾಸ ಮಾಡಿಸಲಾಗಿದೆ. ಮುಂದೆ ಮಕ್ಕಳ ಜ್ಞಾನಾಭಿವೃದ್ಧಿಗೆ ಇದು ಸಹಕಾರಿಯಾಗಲಿದೆ. ಮಕ್ಕಳಿಗೆ ಬೆಂಗಳೂರು ಸಿಟಿ ತೋರಿಸುವುದರ ಜೊತೆಗೆ ವಿಧಾನಸೌಧ, ಹೈಕೋರ್ಟ್, ಕಬ್ಬನ್ ಪಾರ್ಕ್, ಕಿಡ್ಸ್ಜೋನ್ನಲ್ಲಿ ಆಟ ಆಡಿಸಲಾಗುತ್ತದೆ. ಬಳಿಕ ಸಂಜೆ ಮತ್ತೆ ಹುಬ್ಬಳ್ಳಿಗೆ ಕರೆ ತರಲಾಗುತ್ತದೆ " ಎಂದರು.
ಸಂತಸ ವ್ಯಕ್ತಪಡಿಸಿದ ಶಿಕ್ಷಕಿ: ಶಿಕ್ಷಕಿ ಅನ್ನಪೂರ್ಣ ಮುದುಗಲ್ ಮಾತನಾಡಿ, "ಇಂದು ಅತ್ಯದ್ಭುತ ವಿಮಾನಯಾನ ಕೈಗೊಂಡೆವು. ಸರ್ಕಾರಿ ಶಾಲೆಯಲ್ಲಿ ಬಡಮಕ್ಕಳು ಕಲಿಯುತ್ತಿದ್ದಾರೆ. ಅವರು ಸರಿಯಾಗಿ ರೈಲನ್ನೂ ಸಹ ನೋಡಿಲ್ಲ. ಆದರೆ ಇದೀಗ ವಿಮಾನಯಾನ ಮಾಡಿದ್ದು ತುಂಬಾ ಖುಷಿ ತಂದಿದೆ. ಇದು ನಮ್ಮ ಸೌಭಾಗ್ಯ. ನಮ್ಮ ಶಾಲೆಯನ್ನು ಗುರುತಿಸಿ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ ಮಾಡಿಸಿದ ರೌಂಡ್ ಟೇಬಲ್ ಇಂಡಿಯಾ ಮತ್ತು ಲೇಡಿಸ್ ಸರ್ಕಲ್ ಇಂಡಿಯಾಗೆ ಧನ್ಯವಾದಗಳು" ಎಂದು ಹೇಳಿದರು.
ವಿದ್ಯಾರ್ಥಿನಿ ಮಧು ಕಲ್ಲಪ್ಪ, ಸೂರ್ಯವಂಶಿ ಪ್ರತಿಕ್ರಿಯಿಸಿ, ನಮ್ಮನ್ನು ವಿಮಾನ ಪ್ರಯಾಣ ಮಾಡಿಸುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ. ಆಯೋಜಕರಿಗೆ ತುಂಬ ಧನ್ಯವಾದಗಳು ಎಂದರು. ಇನ್ನು ಮೊದಲ ಬಾರಿಗೆ ವಿಮಾನದಲ್ಲಿ ಹಾರಾಟ ಮಾಡಿದ ವಿದ್ಯಾರ್ಥಿಗಳಲ್ಲಿ ಇನ್ನಿಲ್ಲದ ಸಂತೋಷ ಮೂಡಿಸಿತ್ತು.
ಈ ಸಂದರ್ಭದಲ್ಲಿ ಲೇಡಿಸ್ ಸರ್ಕಲ್ ಇಂಡಿಯಾದ ಚೇರ್ಮನ್ ಸುವರ್ಣ ಜರತಾರ್ಘರ್, ರೌಂಡ್ ಟೇಬಲ್ ಇಂಡಿಯಾ ಕಾರ್ಯದರ್ಶಿ ವಿಶ್ವನಾಥ ವಾಳ್ವೇಕರ್, ಪೂಜಾ ಮಹಾಜನ್, ವಿಶ್ವಾಸ ಜೀವಣ್ಣವರ, ರೋಹಿತ್ ಲದ್ವಾ, ಮಿಥುನ್ ಜಿಗಳೂರು, ನಿತೇಶ ತೆಲಿಸರ್, ಅಕ್ಷಯ ಕೊಟ್ಟೂರಶೆಟ್ಟರ್, ಸಂತೋಷ ಕರೆಣ್ಣವರ, ವಿಜೇಶ ಸೈಗಲ್ ಸೇರಿದಂತೆ ಇನ್ನಿತರರು ಇದ್ದರು.
ಇದನ್ನೂ ಓದಿ: ಬಳ್ಳಾರಿ ವೈಕಿಂಗ್ಸ್ ರೌಂಡ್ ಟೇಬಲ್ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಉಚಿತ ವಿಮಾನ ಪ್ರಯಾಣ
ಇದನ್ನೂ ಓದಿ: ಸರ್ಕಾರಿ ಶಾಲೆ ಮಕ್ಕಳಿಗೆ ಸ್ವಂತ ಖರ್ಚಿನಲ್ಲಿ ವಿಮಾನದಲ್ಲಿ ಹೈದರಾಬಾದ್ ಪ್ರವಾಸ: ಹಾಜರಾತಿ ಹೆಚ್ಚಿಸಲು ಶಿಕ್ಷಕನ ಐಡಿಯಾ