ಬ್ರಿಡ್ಜ್‌ಟೌನ್ (ಬಾರ್ಬಡೋಸ್):ಭಾರತೀಯ ಕ್ರಿಕೆಟ್‌ನ ಇಬ್ಬರು ಸಾರ್ವಕಾಲಿಕ ಶ್ರೇಷ್ಠ ಆಟಗಾರರಾದ ನಾಯಕ ರೋಹಿತ್ ಶರ್ಮಾ ಮತ್ತು ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ.
ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್‌ಗಳ ಗೆಲುವು ಸಾಧಿಸಿದೆ. ಈ ಗೆಲುವಿನಲ್ಲಿ 76 ರನ್ ಗಳ ಕೊಡುಗೆ ನೀಡಿ,ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದ ಕೊಹ್ಲಿ ತಮ್ಮ ನಿರ್ಧಾರವನ್ನು ಘೋಷಿಸಿದರು. ಇದಾದ ಬೆನ್ನಲ್ಲೇ ರೋಹಿತ್ ಕೂಡ ನಿವೃತ್ತಿ ಘೋಷಿಸಿದರು.ಅಂದುಕೊಂಡಿದ್ದನ್ನು ಸಾಧಿಸಿದ್ದೇನೆ. ಹೀಗಾಗಿ ಪಕ್ಕಕ್ಕೆ ಸರಿಯುವ ಸಮಯ ಬಂದಿದೆ ಎಂದು ಘೋಷಿಸಿದರು.
ಕೊಹ್ಲಿ ಹೇಳಿದ್ದಿಷ್ಟು: "ಇದು ನನ್ನ ಕೊನೆಯ T20 ವಿಶ್ವಕಪ್ ಮತ್ತು ನಾನು ಬಯಸಿದ್ದು ಇದನ್ನೇ’’ ಎಂದು ಕೊಹ್ಲಿ ಹೇಳಿದರು. ನಾನು ಕೃತಜ್ಞತೆಯಿಂದ ತಲೆ ಬಾಗಿಸುತ್ತೇನೆ. ತಂಡಕ್ಕೆ ಅತ್ಯಂತ ಮುಖ್ಯವಾದ ದಿನವಾದ ಇಂದು ಕೆಲಸವನ್ನು ಮಾಡಲು ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ ಅಂತಾನೂ ಕೊಹ್ಲಿ ಹೇಳಿದರು.
ನಿವೃತ್ತಿ ಘೋಷಿಸಿದ ರೋಹಿತ್ ಮಾತನಾಡಿದ್ದಿಷ್ಟು:"ಇದು ನನ್ನ ಕೊನೆಯ ಪಂದ್ಯವೂ ಆಗಿತ್ತು. ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯವಿಲ್ಲ. ನಾನು ಇದನ್ನು (ಟ್ರೋಫಿ) ಬಯಸಿದ್ದೆ. ಪದಗಳಲ್ಲಿ ಹೇಳುವುದು ತುಂಬಾ ಕಷ್ಟ" ಎಂದರು. ನಾನು ಏನು ಬಯಸಿದ್ದೆನೋ ಅದು ಸಂಭವಿಸಿದೆ. ನನ್ನ ಜೀವನದಲ್ಲಿ ಇದಕ್ಕಾಗಿ ನಾನು ತುಂಬಾ ಕಾತರನಾಗಿದ್ದೆ. ನಾವು ಈ ಬಾರಿ ಇದನ್ನು ಸಾಧಿಸಿದ್ದಕ್ಕೆ ಸಂತೋಷವಾಗಿದೆ" ಎಂದು ಅವರು ಹೇಳಿದರು.
ರೋಹಿತ್ ಸಾಧನೆ:37 ವರ್ಷದ ರೋಹಿತ್ 2022 ರ ಟಿ 20 ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸಿದ್ದರು. ಆದರೆ ಆ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಸೋತು ಟೀಂ ಇಂಡಿಯಾ ಟೂರ್ನಿಯಿಂದ ಹೊರ ಬಿದ್ದಿತ್ತು. ಒಂದು ವರ್ಷದ ನಂತರ, ಭಾರತವು ಅವರ ನಾಯಕತ್ವದಲ್ಲಿ ತವರಿನಲ್ಲಿ ನಡೆದ 50-ಓವರ್‌ಗಳ ವಿಶ್ವಕಪ್‌ನ ಫೈನಲ್‌ಗೆ ಎಂಟ್ರಿ ಪಡೆದಿತ್ತು. ಆದರೆ ಅಹಮದಾಬಾದ್‌ನಲ್ಲಿ ನಡೆದ ಫೈನಲ್ ನಲ್ಲಿ ರೋಹಿತ್ ಪಡೆ ಆಸ್ಟ್ರೇಲಿಯಾಕ್ಕೆ ಶರಣಾಗುವ ಮೂಲಕ ಭಾರತೀಯರ ಕನಸು ಭಗ್ನಗೊಂಡಿತ್ತು.