ಮುಂಬೈ (ಮಹಾರಾಷ್ಟ್ರ): ಇನ್ನು 5 ದಿನಗಳಲ್ಲಿ 2024ರ ಐಪಿಎಲ್ ಆರಂಭವಾಗಲಿರುವ ಹಿನ್ನೆಲೆ ಆಯಾ ತಂಡಗಳ ಆಟಗಾರರು ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ಎಲ್ಲರ ಕಣ್ಣು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೇಲೆ ನೆಟ್ಟಿತ್ತು. ವೈಯಕ್ತಿಕ ಕಾರಣಗಳಿಂದ ಸುಮಾರು ಎರಡು ತಿಂಗಳ ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದ ವಿರಾಟ್ ಈ ಬಾರಿಯ ಐಪಿಎಲ್ನಲ್ಲಿ ಕಣಕ್ಕೆ ಇಳಿಯಲಿದ್ದಾರೆ. ವಿರಾಟ್ ಯಾವಾಗ ಬ್ಯಾಟ್ ಹಿಡಿದು ಮೈದಾನಕ್ಕಿಳಿಯುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇತ್ತೀಚೆಗಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ವಿರಾಟ್ ಕ್ಯಾಮರಾ ಕಣ್ಣಿಗೆ ಬಿದ್ದಿದ್ದರು. ಇದೀಗ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಭಾನುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ವಿರಾಟ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಎರಡನೇ ಮಗು ಅಕಾಯ್ ಕೊಹ್ಲಿ ಹುಟ್ಟಿದ ನಂತರ ಲಂಡನ್‌ನಿಂದ ಭಾರತಕ್ಕೆ ಬಂದ ವಿರಾಟ್ ಕೊಹ್ಲಿ ಬಿಳಿ ಗಡ್ಡದಲ್ಲಿ ಕಾಣಿಸಿಕೊಂಡರು. ಈ ಹೊಸ ಲುಕ್‌ನಲ್ಲಿ ವಿರಾಟ್ ಅವರನ್ನು ನೋಡಿದ ನಂತರ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. 'ಬಿಳಿ ಗಡ್ಡವಿರುವ ಅಕಾಯ್ ಡ್ಯಾಡಿ' ಎಂಬ ಶೀರ್ಷಿಕೆಯೊಂದಿಗೆ ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ. ಭಾರತಕ್ಕೆ ಬಂದ ನಂತರ ವಿರಾಟ್ ಶೀಘ್ರದಲ್ಲೇ ಆರ್‌ಸಿಬಿ ಕ್ಯಾಂಪ್ ಸೇರಿ ಅಭ್ಯಾಸ ಆರಂಭಿಸಲಿದ್ದಾರೆ. ಮಾರ್ಚ್ 22 ರಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದೊಂದಿಗೆ 2024ರ ಐಪಿಎಲ್ ಆರಂಭವಾಗಲಿದೆ. ಎರಡೂ ತಂಡಗಳು ಗೆಲುವಿನೊಂದಿಗೆ ಈ ಸೀಸನ್ ಆರಂಭಿಸುವ ನಿರೀಕ್ಷೆಯಲ್ಲಿವೆ.