ಧರ್ಮಶಾಲಾ:ಭಾರತದ ಹಿರಿಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರು ಈ ವರ್ಷ ನಡೆಯುವ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಳಿಕ ಎಲ್ಲ ವಿಧದ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ 38 ವರ್ಷದ ಕಾರ್ತಿಕ್ 2008 ರಿಂದ ಈವರೆಗಿನ ಎಲ್ಲಾ 16 ಆವೃತ್ತಿಗಳಲ್ಲಿ ಆಡಿದ್ದಾರೆ. ವಿಶೇಷವೆಂದರೆ, ಕೇವಲ 2 ಪಂದ್ಯಗಳಲ್ಲಿ ಮಾತ್ರ ಅವರು ಕಾಣಿಸಿಕೊಂಡಿರಲಿಲ್ಲ. 2024 ರ 17ನೇ ಆವೃತ್ತಿಯ ಬಳಿಕ ಐಪಿಎಲ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
6 ಫ್ರಾಂಚೈಸಿ ಪ್ರತಿನಿಧಿಸಿದ ಆಟಗಾರ:ಐಪಿಎಲ್‌ನಲ್ಲಿ ಅತ್ಯಂತ ಅನುಭವಿ ಬ್ಯಾಟರ್‌ಗಳಲ್ಲಿ ಒಬ್ಬರಾದ ಕಾರ್ತಿಕ್ 6 ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ. ಡೆಲ್ಲಿ ಡೇರ್ಡೆವಿಲ್ಸ್ (ಡೆಲ್ಲಿ ಕ್ಯಾಪಿಟಲ್ಸ್) ಮೂಲಕ ಐಪಿಎಲ್ ಕ್ರಿಕೆಟ್ ಆರಂಭಿಸಿದರು. ಬಳಿಕ 2011ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಸೇರಿದರು. 2012-12 ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದರು. 2014 ರಲ್ಲಿ ನಡೆದ ಹರಾಜಿನಲ್ಲಿ ಡೆಲ್ಲಿ ತಂಡಕ್ಕೆ ಮರಳಿದ್ದರು.
ಇದರ ಮುಂದಿನ ವರ್ಷ ಅಂದರೆ 2015 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದರು. ನಂತರ 2016-17 ರಲ್ಲಿ ಗುಜರಾತ್ ಲಯನ್ಸ್ ತಂಡದಲ್ಲಿ ಕಾಣಿಸಿಕೊಂಡರು. 2018 ರಿಂದ 21 ರವರೆಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ನಾಲ್ಕು ಋತುಗಳಲ್ಲಿ ಆಡಿದರು. ಇದೇ ವೇಳೆ ಕೆಕೆಆರ್ ತಂಡದ ನಾಯಕರಾಗಿದ್ದ ದಿನೇಶ್, 2018 ರ ಆವೃತ್ತಿಯಲ್ಲಿ ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ದಿದ್ದರು. 2019 ರಲ್ಲಿ ಇವರ ನಾಯಕತ್ವದಲ್ಲಿ ತಂಡ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿತ್ತು.
ಬಳಿಕ 2022 ರಲ್ಲಿ ಆರ್ಸಿಬಿಗೆ ಮತ್ತೆ ಮರಳಿದರು. ಕಳೆದ ಆವೃತ್ತಿಯಲ್ಲಿ ಉತ್ತಮ ಬ್ಯಾಟ್ ಮಾಡಿದ ಕಾರ್ತಿಕ್ ತಂಡದ ಪ್ರಮುಖ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. 2022ರ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆದ ಹಿರಿಯ ಆಟಗಾರ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಇದರ ಬಳಿಕ ಕಾಮೆಂಟೇಟರ್ ಆಗಿ ಗುರುತಿಸಿಕೊಂಡರು.
ಐಪಿಎಲ್ ಸಾಧನೆ:ಕಾರ್ತಿಕ್ ಈವರೆಗೂ 242 ಐಪಿಎಲ್ ಪಂದ್ಯಗಳಲ್ಲಿ 25.81 ಸರಾಸರಿಯಲ್ಲಿ 4516 ರನ್ ಗಳಿಸಿದ್ದಾರೆ. ಇದರಲ್ಲಿ 20 ಅರ್ಧ ಶತಕ ಬಾರಿಸಿದ್ದಾರೆ. ವಿಕೆಟ್ ಕೀಪಿಂಗ್ನಲ್ಲಿ 141 ಕ್ಯಾಚ್‌ಗಳು ಮತ್ತು 36 ಸ್ಟಂಪಿಂಗ್ ಮಾಡಿದ್ದಾರೆ.
ಇದನ್ನೂ ಓದಿ:ಐಪಿಎಲ್ 2024ರ ಪ್ರೋಮೋ ರಿಲೀಸ್: ಪಂತ್, ಅಯ್ಯರ್, ಪಾಂಡ್ಯ, ರಾಹುಲ್ ಮಿಂಚು