ಬೆಂಗಳೂರು: ಐಸಿಸಿ ಟಿ-20 ವಿಶ್ವಕಪ್ ಸಮರಕ್ಕೆ ತಂಡಗಳು ಪ್ರಕಟವಾಗಿವೆ. ಜೂನ್ 2ರಿಂದ ಆರಂಭವಾಗಲಿರುವ ಚುಟುಕು ಮಹಾಸಮರದ ಆತಿಥ್ಯವನ್ನು ವೆಸ್ಟ್ ಇಂಡೀಸ್ ಹಾಗೂ ಯುಎಸ್ಎ ಜಂಟಿಯಾಗಿ ವಹಿಸುತ್ತಿವೆ. ಯುಎಸ್ಎ ಸಹ ಈ ಬಾರಿಯ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ತನ್ನ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಕನ್ನಡಿಗ, ಎಡಗೈ ಸ್ಪಿನ್ನರ್ 33 ವರ್ಷದ ನಾಸ್ತುಷ್ ಕೆಂಜಿಗೆ ಸ್ಥಾನ ಪಡೆದಿರುವುದು ವಿಶೇಷ. ಇವರು ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಗೆಳೆಯ ಹಾಗೂ ಸಹ ಲೇಖಕರಾಗಿರುವ ಪ್ರದೀಪ್ ಕೆಂಜಿಗೆ ಅವರ ಪುತ್ರ ಎಂಬುದು ಸಾಕಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ.
ನಾಸ್ತುಷ್ ಅವರ ತಂದೆ ಪ್ರದೀಪ್ ಅವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನವರು. ಪೂರ್ಣಚಂದ್ರ ತೇಜಸ್ವಿ ಅವರೊಂದಿಗೆ ಒಡನಾಟ ಹೊಂದಿದ್ದ ಪ್ರದೀಪ್, ಅವರೊಂದಿಗೆ ಅನೇಕ ಕೃತಿಗಳ ಅನುವಾದದಲ್ಲೂ ಜೊತೆಯಾಗಿದ್ದವರು. ಕೃಷಿ ವಿಭಾಗದಲ್ಲಿ ಉನ್ನತ ವ್ಯಾಸಂಗಕ್ಕಾಗಿ 80ರ ದಶಕದಲ್ಲಿ ಅಮೆರಿಕದ ಅಲಬಾಮಾಗೆ ತೆರಳಿದ್ದ ಪ್ರದೀಪ್, ಕೃಷಿ ಸಂಶೋಧನೆ ವಿಭಾಗದಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ಬಳಿಕ ಕುಟುಂಬದೊಂದಿಗೆ ಭಾರತಕ್ಕೆ ಮರಳಿದ್ದ ಅವರು ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ನೋಡಿಕೊಳ್ಳುತ್ತಿದ್ದಾರೆ. ಕ್ರಿಕೆಟ್‌ನಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ನಾಸ್ತುಷ್ ಆರಂಭದಲ್ಲಿ ಬೆಂಗಳೂರಿನ ದಯಾನಂದ್ ಸಾಗರ್ ಕಾಲೇಜು ಸೇರಿದಂತೆ ಕ್ಲಬ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಕಣಕ್ಕಿಳಿದ್ದರು.
ಆದರೆ, 2015ರಲ್ಲಿ ಯುಎಸ್ಎಗೆ ಮರಳಿದ ನಾಸ್ತುಷ್ ವರ್ಜಿನಿಯಾದಲ್ಲಿ ಬಯೋಲಾಜಿಕಲ್ ಟೆಕ್ನಿಶಿಯನ್ ಆಗಿ ವೃತ್ತಿ ಆರಂಭಿಸಿದರು. ಬಳಿಕ ಸ್ಥಳೀಯ ಕ್ಲಬ್‌ಗಳ ಪರ ಕ್ರಿಕೆಟ್ ಆಡಲಾರಂಭಿಸಿದ್ದರು. ಹುಟ್ಟಿನಿಂದ ಅಮೆರಿಕದ ಪೌರತ್ವ ಹೊಂದಿರುವ ನಾಸ್ತುಷ್ 2019ರಲ್ಲಿ ಯುಎಇ ವಿರುದ್ಧದ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮೊದಲ ಬಾರಿಗೆ ಯುಎಸ್ಎ ತಂಡದ ಪರ ಪಾದಾರ್ಪಣೆ ಮಾಡಿದ್ದರು.