ಜೋಹಾನ್ಸ್‌ಬರ್ಗ್:ಐಪಿಎಲ್ ಮುಗಿದ ಬೆನ್ನಲ್ಲೇ ವಿಶ್ವಕಪ್ ಕ್ರಿಕೆಟ್ ಹಂಗಾಮ ನಡೆಯಲಿದೆ. ಇದಕ್ಕಾಗಿ ಎಲ್ಲ ಕ್ರಿಕೆಟ್ ರಾಷ್ಟ್ರಗಳು ಸಜ್ಜಾಗುತ್ತಿವೆ. ನಡೆಯುತ್ತಿರುವ ಐಪಿಎಲ್‌ನಲ್ಲಿ ಹಲವು ಫ್ರಾಂಚೈಸಿಗಳ ಪರ ಆಡುತ್ತಿರುವ ವಿವಿಧ ರಾಷ್ಟ್ರಗಳ ಆಟಗಾರರು, ತಮ್ಮ ರಾಷ್ಟ್ರೀಯ ತಂಡದ ಪರವಾಗಿ ಆಡಲು ದೇಶಕ್ಕೆ ಹಿಂತಿರುಗುತ್ತಿದ್ದಾರೆ.
ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಅವರು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಪ್ರತಿನಿಧಿಸುತ್ತಿರುವ ಪಂಜಾಬ್ ಕಿಂಗ್ಸ್ ಅನ್ನು ತೊರೆದು ದಕ್ಷಿಣ ಆಫ್ರಿಕಾಕ್ಕೆ ಬುಧವಾರ ಮರಳಿದ್ದಾರೆ. ಈ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ. ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ 28 ವರ್ಷದ ಕಗಿಸೊ ರಬಾಡಾ ದಕ್ಷಿಣ ಆಫ್ರಿಕಾಕ್ಕೆ ಆಗಮಿಸಿದ್ದು, ತಜ್ಞರ ಸಂಪರ್ಕದಲ್ಲಿದ್ದಾರೆ. ಕ್ರಿಕೆಟ್ ದಕ್ಷಿಣ ಆಫ್ರಿಕಾ ವೈದ್ಯಕೀಯ ತಂಡವು ಅವರನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಸಿಎಸ್ಎ ಹೇಳಿಕೆಯಲ್ಲಿ ತಿಳಿಸಿದೆ.
ಮುಂದಿನ ತಿಂಗಳು ಕೆರಿಬಿಯನ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ಗೆ ರಬಾಡ ತಯಾರಿ ನಡೆಸುತ್ತಿದ್ದಾರೆ. ಗಾಯವು ಅವರ ಆಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಹೇಳಿದೆ.
ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಬೌಲಿಂಗ್ ದಾಳಿಯನ್ನು ಮುನ್ನಡೆಸುತ್ತಿರುವ ರಬಾಡ, ಆಡಿದ ಪಂದ್ಯಗಳಿಂದ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಪಂಜಾಬ್ ಕಿಂಗ್ಸ್ ಈಗಾಗಲೇ ಐಪಿಎಲ್ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ. ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಮೊದಲ ಪಂದ್ಯ ಮೇ 15ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುವಾಹಟಿಯಲ್ಲಿ ಆಡಲಿದೆ. ಬಳಿಕ ಮೇ 19 ರಂದು ಕೊನೆಯ ಲೀಗ್ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.
ಕಗಿಸೊ ರಬಾಡ ಪಂಜಾಬ್ ಕಿಂಗ್ಸ್‌ನ ವೇಗದ ದಾಳಿಯ ಅಂಗವಾಗಿದ್ದರು. ಅರ್ಷದೀಪ್ ಸಿಂಗ್ ಜೊತೆಗೆ ತಂಡದ ವಿಕೆಟ್ ಟೇಕರ್ ಆಗಿದ್ದರು. ಐಪಿಎಲ್ 2022 ರ ಮೊದಲು ಪಂಜಾಬ್ ಕಿಂಗ್ಸ್ ಬಲಗೈ ವೇಗಿಯನ್ನು 9.25 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಜೂನ್ 3 ರಂದು ನ್ಯೂಯಾರ್ಕ್‌ನಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.
ಆರ್ಸಿಬಿಯ ವಿಲ್ ಜಾಕ್ಸ್, ಟಾಪ್ಲಿ ಸೇರಿದಂತೆ ಹಲವು ತಂಡಗಳ ಆಟಗಾರರು ಪ್ಲೇಆಫ್ಗೂ ಮುನ್ನ ತಮ್ಮ ರಾಷ್ಟ್ರೀಯ ತಂಡವನ್ನು ಸೇರಿದ್ದಾರೆ. ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಆರ್ಸಿಬಿ, ಸಿಎಸ್ಕೆ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಅಂತಿಮ ಹೋರಾಟ ನಡೆಸುತ್ತಿವೆ.
ಇದನ್ನೂ ಓದಿ:"ನೀವು ನಗುವವರೆಗೂ ಲವ್ ಪ್ರಪೋಸ್ ಮಾಡಲ್ಲ": ಗೌತಮ್ 'ಗಂಭೀರ್'ಗೆ ಅಭಿಮಾನಿಯೊಬ್ಬಳಿಂದ ಷರತ್ತು - Gautam Gambhir