ಸೇಂಟ್ ಡೆನಿಸ್ (ಫ್ರಾನ್ಸ್):ಸೇಂಟ್ ಲೂಸಿಯಾದ ಓಟಗಾರ್ತಿ ಜೂಲಿಯನ್ ಆಲ್ಫ್ರೆಡ್ ಶನಿವಾರ ನಡೆದ ಪ್ಯಾರಿಸ್ ಒಲಿಂಪಿಕ್ನಲ್ಲಿ ವಿಶ್ವದ ಅತ್ಯಂತ ವೇಗದ ಓಟಗಾರ್ತಿ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ. ಸೇಂಟ್ ಲೂಸಿಯಾದ ಓಟಗಾರ್ತಿ ಜೂಲಿಯನ್ ಆಲ್ಫ್ರೆಡ್ ಅವರು 100 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆಲ್ಲುವುದರೊಂದಿಗೆ ಹೊಸ ದಾಖಲೆ ನಿರ್ಮಿಸಿದ್ದಾರೆ. 10.72 ಸೆಕೆಂಡುಗಳಲ್ಲಿ ಈ ಸಾಧನೆ ಮಾಡುವ ಮೂಲಕ ಸೇಂಟ್ ಲೂಸಿಯಾಗೆ ಮೊದಲ ಒಲಿಂಪಿಕ್ ಪದಕವನ್ನು ತಂದುಕೊಟ್ಟ ಕೀರ್ತಿಗೆ ಪಾತ್ರವಾಗಿದ್ದಾರೆ. ಈ ಪದಕವನ್ನು ಅವರ ದಿವಂಗತ ತಂದೆಗೆ ಅರ್ಪಿಸಿದ್ದಾರೆ.
ಆಲ್ಫ್ರೆಡ್ ತುಂಬಾ ವೇಗವಾಗಿ ಓಡುತ್ತಿದ್ದಳು ಎಂದು ಅವಳಲ್ಲಿರುವ ಪ್ರತಿಭೆಯನ್ನು ಬಾಲ್ಯದಲ್ಲೇ ಶಾಲೆಯ ಶಿಕ್ಷಕರು ಗುರುತಿಸಿದ್ದರು. ಆದರೆ, ಅವಳು ಸುಮಾರು 12 ವರ್ಷದವಳಿದ್ದಾಗ ಆಕೆ ತನ್ನ ತಂದೆಯನ್ನು ಕಳೆದುಕೊಂಡ ನಂತರ ಕ್ರೀಡೆಯನ್ನು ತ್ಯಜಿಸಿದ್ದಳು. ಅವಳ ತರಬೇತುದಾರನು ಆಕೆಯನ್ನು ಹಿಂತಿರುಗುವಂತೆ ಮನವೊಲಿಸಿದನು. ಸೇಂಟ್ ಲೂಸಿಯಾದಲ್ಲಿ ಆರಂಭಿಕ ಹಂತದಲ್ಲಿ ಬೆಳೆಯುತ್ತಿರುವಾಗ ಜೂಲಿಯನ್ ಆಲ್ಫ್ರೆಡ್ ಸ್ಪರ್ಧೆಗಳಲ್ಲಿ ಬರಿಗಾಲಿನಲ್ಲಿ ಓಡುತ್ತಿದ್ದಳು. ಇದೀಗ ಪ್ಯಾರಿಸ್ ಒಲಿಂಪಿಕ್ನಲ್ಲಿ ಜೂಲಿಯನ್ ಆಲ್ಫ್ರೆಡ್ ಅವರು ಮಹಿಳೆಯರ 100 ಮೀ ಸ್ಪರ್ಧೆಯಲ್ಲಿ ನೆಚ್ಚಿನ ಓಟಗಾರ ಶಾ ಕ್ಯಾರಿ ರಿಚರ್ಡ್ಸನ್ ಅವರನ್ನು 10.72 ಸೆಕೆಂಡುಗಳಲ್ಲಿ ಸೋಲಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದರು.