ರಾಜ್‌ಕೋಟ್(ಗುಜರಾತ್): ಈ ವರ್ಷ ಜೂನ್ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿವರೆಗೆ ರಾಹುಲ್ ದ್ರಾವಿಡ್ ಅವರು, ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಇರಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.
ಬುಧವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾ, ''ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕಳೆದ ವರ್ಷದ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಅಂತ್ಯಗೊಂಡಿತ್ತು. ಆದರೆ, ಡಿಸೆಂಬರ್ - ಜನವರಿಯಲ್ಲಿ ರಾಹುಲ್ ದ್ರಾವಿಡ್ ಮತ್ತು ಇತರ ತರಬೇತಿ ಸಿಬ್ಬಂದಿಯನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸದವರೆಗೆ ಹುದ್ದೆಯಲ್ಲಿ ಮುಂದುವರಿಯಲು ಅವರನ್ನು ಕೇಳಲಾಯಿತು. ಆಗ ಅವರಿಗೆ ತಮ್ಮ ಅವಧಿಯ ಬಗ್ಗೆ ತಿಳಿಸಿರಲಿಲ್ಲ. ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ವರೆಗೆ ಮುಖ್ಯ ಕೋಚ್ ಆಗಿ ಮುಂದುವರಿಸುವ ಬಗ್ಗೆ ರಾಹುಲ್ ದ್ರಾವಿಡ್ ಜೊತೆ ಪ್ರಾಥಮಿಕ ಮಾತುಕತೆ ನಡೆಸಿದ್ದೇವೆ. ಏಕದಿನ ವಿಶ್ವಕಪ್ ಬಳಿಕ ದ್ರಾವಿಡ್ ಅವರು ಕೂಡಲೇ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಬೇಕಿತ್ತು. ಹಾಗಾಗಿ ಅವರ ಜೊತೆ ಮಾತನಾಡಲು ಸಮಯ ಸಿಕ್ಕಿರಲಿಲ್ಲ. ಇದೀಗ ಸಾಧ್ಯವಾಯಿತು'' ಎಂದು ಅವರು ಇದೇ ವೇಳೆ ಸಮಜಾಯಿಷಿ ಕೂಡಾ ನೀಡಿದರು.
ಇದೇ ವೇಳೆ, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಯ್ ಶಾ, ''ರಾಹುಲ್ ದ್ರಾವಿಡ್ ಅವರಂತಹ ಹಿರಿಯ ವ್ಯಕ್ತಿಯ ಒಪ್ಪಂದದ ಬಗ್ಗೆ ನೀವೇಕೆ ಇಷ್ಟು ತಲೆಕೆಡಿಸಿಕೊಳ್ಳುತ್ತಿದ್ದೀರಿ? ಟಿ20 ವಿಶ್ವಕಪ್ ಪಂದ್ಯಾವಳಿವರೆಗೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಇರಲಿದ್ದಾರೆ. ಈ ಬಗ್ಗೆ ಅವರ ಜೊತೆ ಮತ್ತಷ್ಟು ಮಾತುಕತೆ ನಡೆಸಲಿದ್ದೇವೆ'' ಎಂದು ಅವರು ಹೇಳಿದ್ದಾರೆ.