ಪಂಚಕುಲ: ಜಾವೆಲಿನ್ ಪಟು ಡಿ.ಪಿ.ಮನು ಅವರು ಉದ್ದೀಪನ ಮದ್ದು ಸೇವನೆ ಜಾಲದಲ್ಲಿ ಸಿಲುಕಿರುವ ಶಂಕೆಯ ಹಿನ್ನೆಲೆಯಲ್ಲಿ ಸ್ಪರ್ಧೆಗಳಿಂದ ದೂರ ಉಳಿಯುವಂತೆ ಅವರಿಗೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಸೂಚನೆ ನೀಡಿದೆ.
2023ರ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಗೆದ್ದ 24 ವರ್ಷದ ಮನು, ವಿಶ್ವ ರ‍್ಯಾಂಕಿಂಗ್ ಕೋಟಾ ಮೂಲಕ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವುದು ಬಹುತೇಕ ಖಚಿತವಾಗಿತ್ತು. ಆದರೆ ಇತ್ತೀಚಿನ ಬೆಳವಣಿಗೆಯ ನಂತರ ಅವರು ಪ್ಯಾರಿಸ್ಗೆ ಹೋಗುವುದು ಅನುಮಾನವಾಗಿದೆ. ಗುರುವಾರ ಇಲ್ಲಿ ಪ್ರಾರಂಭವಾದ ರಾಷ್ಟ್ರೀಯ ಅಂತರ-ರಾಜ್ಯ ಚಾಂಪಿಯನ್ ಶಿಪ್ ನ ಆರಂಭಿಕ ಪ್ರವೇಶ ಪಟ್ಟಿಯಲ್ಲಿ ಅವರ ಹೆಸರಿತ್ತು. ಆದರೆ ಪರಿಷ್ಕರಿಸಲಾದ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿದೆ.
ಮನು ಅವರನ್ನು ಸ್ಪರ್ಧೆಗಳಿಂದ ತಡೆಯುವಂತೆ ನಾಡಾ, ಫೆಡರೇಷನ್ಗೆ ಸೂಚಿಸಿದೆ. ಆದರೆ ಮನು ಅವರು ಡೋಪಿಂಗ್ ಅಪರಾಧ ಎಸಗಿದ್ದಾರೆಯೇ ಎಂಬುದನ್ನು ದೃಢಪಡಿಸಿಲ್ಲ ಎಂದು ಎಎಫ್ಐ ಅಧ್ಯಕ್ಷ ಅಡಿಲ್ಲೆ ಸುಮರಿವಾಲಾ ಪಿಟಿಐಗೆ ತಿಳಿಸಿದ್ದಾರೆ. "ಅಂತಹ ಏನಾದರೂ ವಿಷಯ ಇರಬಹುದು. ಆದರೆ ಸತ್ಯ ಏನೆಂಬುದು ನಮಗೆ ಇನ್ನೂ ತಿಳಿದಿಲ್ಲ. ಮನು ಅವರನ್ನು ಸ್ಪರ್ಧೆಗಳಿಂದ ಹೊರಗಿಡುವಂತೆ ನಾಡಾದಿಂದ ಎಎಫ್ಐ ಕಚೇರಿಗೆ ನಿನ್ನೆ ದೂರವಾಣಿ ಕರೆ ಬಂದಿತ್ತು" ಎಂದು ಸುಮರಿವಾಲಾ ಹೇಳಿದ್ದಾರೆ.