ನವದೆಹಲಿ : ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿನೂತನ ಸಾಧನೆಯೊಂದನ್ನು ಮಾಡಿದ್ದಾರೆ. ಕ್ರಿಕೆಟ್ನ ಮೂರು ಮಾದರಿಗಳಲ್ಲಿ ನಂಬರ್ 1 ವೇಗದ ಬೌಲರ್ ಪಟ್ಟವನ್ನು ಅಲಂಕರಿಸಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಭಾರತದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಟೆಸ್ಟ್ ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ 9 ವಿಕೆಟ್ ಪಡೆಯುವ ಮೂಲಕ ಈ ವಿಶ್ವ ದಾಖಲೆಯನ್ನು ಸುವರ್ಣಾಕ್ಷರಗಳಲ್ಲಿ ದಾಖಲಿಸಿದ್ದಾರೆ.
ಇದರ ಬೆನ್ನೆಲ್ಲೇ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಜಸ್ಪ್ರೀತ್ ಬುಮ್ರಾ ಭಾವನಾತ್ಮಕ ಸ್ಟೋರಿವೊಂದನ್ನು ಹಂಚಿಕೊಂಡಿದ್ದಾರೆ. ಈ ಸ್ಟೋರಿ ನೋಡಿದ ಕೆಲವು ಕ್ರಿಕೆಟ್ ಅಭಿಮಾನಿಗಳು ಭಾವುಕರಾಗಿದ್ದಾರೆ. ಹೌದು, ಎರಡು ಚಿತ್ರಗಳಿರುವ ಫೋಟೋ ವಿಭಿನ್ನ ಕಥೆಗಳನ್ನು ಹೇಳಿತ್ತಿದೆ. ಒಂದು ಚಿತ್ರದಲ್ಲಿ ಒಂಟಿ ವ್ಯಕ್ತಿ ಮತ್ತು ಇನ್ನೊಂದು ಫೋಟೋದಲ್ಲಿ ದೊಡ್ಡ ಗುಂಪು ಇರುವುದನ್ನು ಗಮನಿಸಬಹುದು. ಚಿತ್ರಗಳ ಕೆಳಗೆ ಬೆಂಬಲ ಮತ್ತು ಅಭಿನಂದನೆಗಳು ಎಂದು ಅಡಿ ಬರಹ ಕೂಡಾ ಹಾಕಿದ್ದಾರೆ. ಒಬ್ಬನೇ ವ್ಯಕ್ತಿ ಇರುವ ಫೋಟೋವನ್ನು ಬೆಂಬಲ ಮತ್ತು ಜನಸಂದಣಿ ಇರುವ ಫೋಟೋವನ್ನು ಅಭಿನಂದನೆ ಎಂದು ಬುಮ್ರಾ ಹೇಳಿದ್ದಾರೆ.