ನವದೆಹಲಿ:ಭಾರತ ಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಸ್ಪಿನ್ ಚತುರ ಯಜುವೇಂದ್ರ ಚಹಲ್ ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಭಾರತದ ಮೊದಲ ಮತ್ತು ವಿಶ್ವದ 5ನೇ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
ಮಂಗಳವಾರ ದಿಲ್ಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ಬೌಲರ್ ಆಗಿರುವ ಚಹಲ್ ದಾಖಲೆ ಪುಟಗಳಲ್ಲಿ ತಮ್ಮ ಹೆಸರು ಬರೆದರು.
ಐಪಿಎಲ್ನ ಈ ಸೀಸನ್ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ಗಳಲ್ಲಿ ಒಬ್ಬರಾದ ಚಹಲ್, ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಅವರನ್ನು 14ನೇ ಓವರ್ನ 5ನೇ ಎಸೆತದಲ್ಲಿ ಔಟ್ ಮಾಡುವ ಮೂಲಕ ಟಿ -20 ಕ್ರಿಕೆಟ್ನಲ್ಲಿ 350ನೇ ವಿಕೆಟ್ ಕಿತ್ತರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಬೌಲರ್ ಎಂಬ ದಾಖಲೆ ಬರೆದರು.
300 ಪಂದ್ಯಗಳನ್ನಾಡಿರುವ ಚಹಲ್ 7.68 ರ ಎಕಾನಮಿ ರೇಟ್ನಲ್ಲಿ 350 ವಿಕೆಟ್ಗಳನ್ನು ಉರುಳಿಸಿದ್ದಾರೆ. ಇವರ ಬಳಿಕ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ 310 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 303, ವೇಗಿ ಭುವನೇಶ್ವರ್ ಕುಮಾರ್ 267, ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ 285 ವಿಕೆಟ್‌ಗಳೊಂದಿಗೆ ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ.
ಇನ್ನು, ಟಿ-20 ಕ್ರಿಕೆಟ್ನಲ್ಲಿ 350 ಕ್ಕೂ ಅಧಿಕ ವಿಕೆಟ್ ಪಡೆದವರಲ್ಲಿ ಅಫ್ಘಾನಿಸ್ಥಾನದ ರಶೀದ್ ಖಾನ್ ಮೊದಲ ಸ್ಥಾನದಲ್ಲಿದ್ದಾರೆ. ಅವರು ಈವರೆಗೂ 572 ವಿಕೆಟ್ ಕಿತ್ತಿದ್ದಾರೆ. ಬಳಿಕ ವೆಸ್ಟ್ ಇಂಡೀಸ್ನ ಸುನಿಲ್ ನರೈನ್ 549, ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ 520, ಬಾಂಗ್ಲಾದೇಶದ ಆಲ್ರೌಂಡರ್ ಶಕೀಬ್ ಅಲ್ ಹಸನ್ 482, ಭಾರತದ ಯಜುವೇಂದ್ರ ಚಹಲ್ 350 ವಿಕೆಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
17ನೇ ಆವೃತ್ತಿಯ ಐಪಿಎಲ್ನಲ್ಲಿ ಆಡಿರುವ 11 ಪಂದ್ಯಗಳಲ್ಲಿ 14 ವಿಕೆಟ್ ಕಿತ್ತು 9ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:ಡೆಲ್ಲಿಯ ಫ್ರೇಸರ್, ಪೊರೆಲ್, ಸ್ಟಬ್ಸ್ ಅಬ್ಬರ: ರಾಜಸ್ಥಾನ ರಾಯಲ್ಸ್ಗೆ 222 ರನ್ಗಳ ಬೃಹತ್ ಗುರಿ - DC vs RR match