ಚೆನ್ನೈ/ವಿಶಾಖಪಟ್ಟಣ:ಭಾನುವಾರ ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಇತಿಹಾಸ ಸೃಷ್ಟಿಸಿದ್ದಾರೆ. ಪೃಥ್ವಿ ಶಾ ಅವರ ಕ್ಯಾಚ್ ಪಡೆಯುವ ಮೂಲಕ ಧೋನಿ, ಟಿ20 ಕ್ರಿಕೆಟ್ನಲ್ಲಿ 300 ಯಶಸ್ವಿ ವಿಕೆಟ್ ಪಡೆದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಳೆದ 3 ಪಂದ್ಯಗಳಿಂದ ಮಿಂಚಿನ ವೇಗದಲ್ಲಿ ವಿಕೆಟ್ ಕೀಪಿಂಗ್ ಮಾಡುವ ಮೂಲಕ 4 ಕ್ಯಾಚ್ ಪಡೆದು ಅಭಿಮಾನಿಗಳ ಮನ ಗೆದ್ದಿರುವ ಧೋನಿ, ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಚಿರತೆಯಷ್ಟೇ ವೇಗವಾಗಿ ಹಾರುವ ಮೂಲಕ ವಿಜಯ್ ಶಂಕರ್ ಅವರ ಕ್ಯಾಚ್ ಪಡೆದಿದ್ದರು. ವಿಕೆಟ್ ಹಿಂದೆ 213 ಕ್ಯಾಚ್, 87 ಸ್ಟಂಪ್ ಸಹಿತ 300 ವಿಕೆಟ್ ಪಡೆದ ಶ್ರೇಯಸ್ಸನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ಬಳಿಕ ಕ್ರಮವಾಗಿ ಭಾರತದ ದಿನೇಶ್ ಕಾರ್ತಿಕ್ 207 ಕ್ಯಾಚ್ + 69 ಸ್ಟಂಪ್ ಸಹಿತ 276 ವಿಕೆಟ್, ಪಾಕಿಸ್ತಾನ ಕಮ್ರಾನ್ ಅಕ್ಮಲ್ 172 ಕ್ಯಾಚ್-102 ಸ್ಟಂಪ್ ಸಹಿತ 274 ವಿಕೆಟ್, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ 220 ಕ್ಯಾಚ್+ 49 ಸ್ಟಂಪ್ ಸಹಿತ 269 ವಿಕೆಟ್ ಮತ್ತು ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್ 167 ಕ್ಯಾಚ್+41 ಸ್ಟಂಪ್ ಸಹಿತ 208 ವಿಕೆಟ್ ಪಡೆದು ಈ ಪಟ್ಟಿಯಲ್ಲಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಕೊನೆಯ ಎರಡು ಓವರ್ಗಳಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆ ಸಹ ಮಹೇಂದ್ರ ಸಿಂಗ್ ಧೋನಿಯ ಹೆಸರಿನಲ್ಲಿದೆ. ಭಾನುವಾರದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 16 ಎಸೆತಗಳನ್ನು ಎದುರಿಸಿದ ಧೋನಿ, ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸ್ಗಳೊಂದಿಗೆ ಅಜೇಯ 37 ರನ್ ಬಾರಿಸಿದ್ದರು. ಈ ಮೂರು ಸಿಕ್ಸ್ಗಳೊಂದಿಗೆ ಧೋನಿ ಐಪಿಎಲ್ನ ಕೊನೆಯ ಎರಡು ಓವರ್ಗಳಲ್ಲಿ ಒಟ್ಟು 100 ಸಿಕ್ಸ್ಗಳನ್ನು ಬಾರಿಸಿದ ವಿಶೇಷ ದಾಖಲೆ ಬರೆದಿದ್ದಾರೆ. ಧೋನಿ ನಂತರದ ಸ್ಥಾನದಲ್ಲಿ 57 ಸಿಕ್ಸರ್‌ಗಳನ್ನು ಹೊಡೆದ ಕೀರಾನ್ ಪೊಲಾರ್ಡ್ ಇದ್ದಾರೆ. ಇದಲ್ಲದೇ ಐಪಿಎಲ್ ಇತಿಹಾಸದಲ್ಲಿ ವಿಕೆಟ್ ಕೀಪರ್ ಆಗಿ 5000 ರನ್ ಗಳಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾಗಿದ್ದಾರೆ. ಇವರನ್ನು ಬಿಟ್ಟರೆ ಇಲ್ಲಿಯವರೆಗೆ ಯಾವುದೇ ವಿಕೆಟ್ ಕೀಪರ್ಗೆ 500 ರನ್ ಗಳಿಸಲು ಸಾಧ್ಯವಾಗಿಲ್ಲ.
42ನೇ ವಯಸ್ಸಿನಲ್ಲೂ ಮಹೇಂದ್ರ ಸಿಂಗ್ ಧೋನಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಸಾಗುತ್ತಿದ್ದು, ನಿವೃತ್ತಿಗೂ ಮುನ್ನ ಈ ದಾಖಲೆ ಪಟ್ಟಿ ಮತ್ತಷ್ಟು ಬೆಳೆಯುವ ನಿರೀಕ್ಷೆಯಿದೆ. ನಿನ್ನೆಯ ಪಂದ್ಯದ ಕೊನೆಯ ಓವರ್ನ ಎರಡನೇ ಎಸೆತದಲ್ಲಿ ಕೇವಲ ಒಂದೇ ಕೈಯಿಂದ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿತು. ಧೋನಿಯ ಒನ್ ಹ್ಯಾಂಡ್ ಸಿಕ್ಸರ್ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಅವರ ಅದ್ಬುತ ಬ್ಯಾಟಿಂಗ್ ಪ್ರದರ್ಶನ ಕಂಡ ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಕೆಲ ಅಭಿಮಾನಿಗಳಿಗೆ ವಿಂಟೇಜ್ ದರ್ಶನ ಮಾಡಿದರು.
ಇದನ್ನೂ ಓದಿ: ಗೆಲುವಿನ ಹೊರತಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ಗೆ 12 ಲಕ್ಷ ರೂ. ದಂಡ - IPL Code of Conduct