ಲಖನೌ(ಉತ್ತರ ಪ್ರದೇಶ): ಗುಜರಾತ್ ಟೈಟಾನ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ತಂಡ ಐದು ವಿಕೆಟ್ ನಷ್ಟಕ್ಕೆ 163 ರನ್ ಕಲೆ ಹಾಕಿತು. ಬೌಲಿಂಗ್ನಲ್ಲಿ ಬಿಗಿ ಹಿಡಿತ ಸಾಧಿಸಿದ ಗುಜರಾತ್ ತಂಡ ತನ್ನ ಗೆಲುವಿಗೆ 164 ರನ್ ಚೇಸ್ ಮಾಡಬೇಕಿದೆ.
ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಕೆ.ಎಲ್.ರಾಹುಲ್ ತಂಡ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಕ್ವಿಂಟನ್ ಡಿ ಕಾಕ್ 6 ರನ್ಗೆ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸಿಗೆ ಬಂದ ದೇವದತ್ ಪಡಿಕಲ್ ಸಹ 7 ರನ್ಗೆ ನಿರ್ಗಮಿಸಿದರು. ಇದರಿಂದ ತಂಡದ ಮೊತ್ತ 18 ರನ್ ಆಗುವಷ್ಟರಲ್ಲಿ ಲಖನೌ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ನಾಲ್ಕನೇ ವಿಕೆಟ್‌ಗೆ ನಾಯಕ ರಾಹುಲ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ಇನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. ಈ ಜೋಡಿ 73 ರನ್ ಕಲೆ ಹಾಕಿ ತಂಡವನ್ನು ಆರಂಭಿಕ ಆಘಾತದಿಂದ ಹೊರತಂದರು. ಆದರೆ, ಈ ಸಂದರ್ಭದಲ್ಲಿ 31 ಎಸೆತ ಎದುರಿಸಿ 33 ರನ್ ಬಾರಿಸಿದ್ದ ರಾಹುಲ್ ಔಟಾದರು. ಮತ್ತೊಂದೆಡೆ, ಅರ್ಧಶತಕದ ಗಡಿದಾಟಿದ ಕೆಲವೇ ಹೊತ್ತಿನಲ್ಲೇ ಸ್ಟೋಯ್ನಿಸ್ (58 ರನ್) ವಿಕೆಟ್ ಒಪ್ಪಿಸಿದರು. ಆಯುಷ್ ಬಡೋನಿ ಮತ್ತು ನಿಕೋಲಸ್ ಪೂರನ್ ದೊಡ್ಡ ಹೊಡೆತಗಳ ಮೂಲಕ ರನ್ ಹೆಚ್ಚಿಸುವ ಪ್ರಯತ್ನ ಮಾಡಿದರು. ಆಯುಷ್ 11 ಬಾಲ್ಗಳಲ್ಲಿ 20 ರನ್ ಸೇರಿಸಿದರು. ಮತ್ತೊಂದೆಡೆ, ಪೂರನ್ ಸಿಕ್ಸರ್ಗಳ ಸಿಡಿದರೂ ಸ್ಟ್ರೈಕ್ ರೇಟ್ ಕಾಯ್ದುಕೊಳ್ಳಲು ಆಗಲಿಲ್ಲ. 22 ಬಾಲ್ಗಳಲ್ಲಿ ಮೂರು ಸಿಕ್ಸರ್ ಸಮೇತವಾಗಿ 32 ರನ್ ಬಾರಿಸಿದ ಪೂರನ್ ಮತ್ತು ಕೃನಾಲ್ ಪಾಂಡ್ಯ (2) ಅಜೇಯರಾಗಿ ಉಳಿದರು.
ಗುಜರಾತ್ ಪರವಾಗಿ ನೂರ್ ಅಹಮದ್, ರಶೀದ್ ಖಾನ್ ಮತ್ತು ಸ್ಪೆನ್ಸರ್ ಜಾನ್ಸನ್, ಉಮೇಶ್ ಯಾದವ್ ಬೌಲಿಂಗ್ನಲ್ಲಿ ಬಿಗಿ ಹಿಡಿತ ಸಾಧಿಸಿದರು. ಅಲ್ಲದೇ, ಉಮೇಶ್ ಯಾದವ್, ದರ್ಶನ್ ನಲ್ಕಂಡೆ ತಲಾ ಎರಡು ವಿಕೆಟ್ ಪಡೆದರೆ, ರಶೀದ್ ಖಾನ್ ಒಂದು ವಿಕೆಟ್ ಪಡೆಯುವಲ್ಲಿ ಸಫಲರಾದರು. ಲಖನೌ ತಂಡ ಈವರೆಗೆ ಮೂರು ಪಂದ್ಯಗಳನ್ನಾಡಿದ್ದು ಎರಡಲ್ಲಿ ಗೆಲುವು ಸಾಧಿಸಿದೆ. ಸದ್ಯ ಅಂಕಪಟ್ಟಿದಲ್ಲಿ ನಾಲ್ಕನೇ ಸ್ಥಾನ ಹೊಂದಿದೆ. ಇಂದಿನ ಪಂದ್ಯ ಗೆದ್ದು ಒಂದು ಅಥವಾ ಎರಡು ಸ್ಥಾನ ಬಡ್ತಿ ಪಡೆಯುವ ವಿಶ್ವಾಸದಲ್ಲಿದೆ.