ನವದೆಹಲಿ:ಐಪಿಎಲ್ ಟೂರ್ನಿಯಲ್ಲಿ ಕಳೆದ ವಾರ ಹೈದರಾಬಾದ್ ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಸೋಲಿನ ಕುರಿತಂತೆ ನಾಯಕ ಕೆ.ಎಲ್.ರಾಹುಲ್ ಬಗ್ಗೆ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅತೃಪ್ತಿ ವ್ಯಕ್ತಪಡಿಸಿದ್ದು, ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಇದೀಗ ಈ ಘಟನೆಯನ್ನು ಮರೆಸುವ ಪ್ರಯತ್ನಕ್ಕೆ ಗೋಯೆಂಕಾ ಮುಂದಾಗಿದ್ದಾರೆ. ಸೋಮವಾರ ರಾತ್ರಿ ಕೆ.ಎಲ್ ರಾಹುಲ್ ಅವರನ್ನು ಔತಣಕ್ಕೆ ತಂಡದ ಮಾಲೀಕರು ಆಹ್ವಾನಿಸಿದ್ದರು ಎಂದು ವರದಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಾಹುಲ್ ಮತ್ತು ಗೋಯೆಂಕಾ ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೇ 8ರಂದು ನಡೆದ ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ತಂಡ 10 ವಿಕೆಟ್ಗಳಿಂದ ಸೋಲು ಕಂಡಿತ್ತು. ಇದು ಟೂರ್ನಿಯಲ್ಲಿ ಲಖನೌ ತಂಡಕ್ಕೆ ಭಾರೀ ಹಿನ್ನಡೆಯನ್ನುಂಟು ಮಾಡಿತ್ತು. ಇದರಿಂದ ತಂಡ ಮಾಲೀಕ ಸಂಜೀವ್ ಗೋಯೆಂಕಾ ಅಸಮಾಧಾನಗೊಂಡಿದ್ದರು. ಪಂದ್ಯ ಮುಗಿದ ತಕ್ಷಣವೇ ಮೈದಾನದ ಹೊರಗೆ ಅಭಿಮಾನಿಗಳ ಮುಂದೆಯೇ ನಾಯಕ ಕೆ.ಎಲ್.ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವಂತೆ ತೋರಿಸುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.
ಇದನ್ನೂ ಓದಿ:10 ವಿಕೆಟ್ಗಳ ಸೋಲಿಗೆ ಲಖನೌ ತಂಡದ ಮಾಲೀಕ ಕೆಂಡ: ನಾಯಕನ ವಿರುದ್ಧ ಮೈದಾನದಲ್ಲೇ ಆಕ್ಷೇಪ
ಸಂಜೀವ್ ಗೋಯೆಂಕಾ ಮತ್ತು ಕೆ.ಎಲ್.ರಾಹುಲ್ ನಡುವಿನ ಮಾತುಕತೆಯ ವಿಡಿಯೋ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಭಾರತ ತಂಡವನ್ನು ಪ್ರತಿನಿಧಿಸುವ ಆಟಗಾರನ ಜೊತೆಗೆ ಗೋಯೆಂಕಾ ನಡೆದುಕೊಂಡ ರೀತಿಯ ಕುರಿತು ಕ್ರಿಕೆಟ್ ಅಭಿಮಾನಿಗಳಿಂದ ಭಾರಿ ಟೀಕೆ ವ್ಯಕ್ತವಾಗಿತ್ತು. ಕೆಲವು ಅಭಿಮಾನಿಗಳು ಕೆ.ಎಲ್.ರಾಹುಲ್ ಅವರಿಗೆ ಲಖನೌ ಸೂಪರ್‌ಜೈಂಟ್ಸ್ ತಂಡವನ್ನು ತೊರೆಯುವಂತೆಯೂ ಸಲಹೆ ನೀಡಿದ್ದರು. ಅಲ್ಲದೇ, ಕ್ರಿಕೆಟ್ ದಿಗ್ಗಜರು ಕೂಡ ಗೋಯೆಂಕಾ ನಡೆ ಬಗ್ಗೆ ಪ್ರಶ್ನೆ ಎತ್ತಿದ್ದರು. ಇದೀಗ ಅಂದಿನ ಘಟನೆಯನ್ನು ಮರೆಸಲು ಗೋಯೆಂಕಾ ಪ್ರಯತ್ನಿಸಿದ್ದಾರೆ.
ಲಖನೌ ತಂಡದ ಮಾಲೀಕ ಗೋಯೆಂಕಾ ಕಳೆದ ಸೋಮವಾರ ರಾತ್ರಿ ಕೆ.ಎಲ್.ರಾಹುಲ್ ಅವರನ್ನು ಊಟಕ್ಕೆ ಆಹ್ವಾನಿಸಿದ್ದರು. ಬಳಿಕ ರಾಹುಲ್ ಅವರನ್ನು ಅಪ್ಪಿಕೊಂಡರು ಎಂದು ವರದಿಯಾಗಿವೆ. ಇವರಿಬ್ಬರ ಅಪ್ಪುಗೆಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಮೂಲಕ ಲಖನೌ ತಂಡದಲ್ಲಿ ಎಲ್ಲವೂ ಚೆನ್ನಾಗಿದೆ ಎಂಬ ಸಂದೇಶ ರವಾನಿಸುವ ಯತ್ನ ಮಾಡಲಾಗಿದೆ.
ಇಂದು ಲಖನೌಗೆ ಮಹತ್ವದ ಪಂದ್ಯ:ಐಪಿಎಲ್ ಟೂರ್ನಿಯಲ್ಲಿ ಪ್ಲೇಆಫ್‌ಗೆ ಹೋಗುವ ಲಖನೌ ಆಸೆ ಜೀವಂತವಾಗಿದೆ. ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಮಹತ್ವದ ಪಂದ್ಯ ನಡೆಯಲಿದೆ. ಇದುವರೆಗೆ 12 ಪಂದ್ಯಗಳನ್ನಾಡಿರುವ ಲಖನೌ 6 ರಲ್ಲಿ ಗೆದ್ದಿದೆ. ಮತ್ತೊಂದೆಡೆ, ಡೆಲ್ಲಿ 13 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಅಂಕಪಟ್ಟಿಯಲ್ಲಿ ಎರಡೂ ತಂಡಗಳು ತಲಾ 12 ಅಂಕಗಳನ್ನು ಹೊಂದಿವೆ.
ಇದನ್ನೂ ಓದಿ:ಕೆಎಲ್ ರಾಹುಲ್ ವಿರುದ್ದ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಅಸಮಾಧಾನ: ತಂಡದ ಸಹಾಯಕ ಕೋಚ್ ಹೇಳಿದ್ದೇನು?