ಕೋಲ್ಕತ್ತಾ: ಮುಂಬೈ ಇಂಡಿಯನ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಕೆಕೆಆರ್ ಆಲ್‌ರೌಂಡರ್ ರಮಣ್‌ದೀಪ್ ಸಿಂಗ್ ಅವರಿಗೆ ಪಂದ್ಯ ಶುಲ್ಕದ ಶೇಕಡಾ 20 ರಷ್ಟು ದಂಡ ವಿಧಿಸಲಾಗಿದೆ. 27 ವರ್ಷದ ಆಟಗಾರ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.20 ಅಡಿಯಲ್ಲಿ ಲೆವೆಲ್ ಒನ್ ಅಪರಾಧ ಎಸಗಿದ್ದಾರೆ. ತಮ್ಮ ಅಪರಾಧವನ್ನು ಒಪ್ಪಿಕೊಂಡ ಆಟಗಾರ ದಂಡವನ್ನು ಸ್ವೀಕರಿಸಿದ್ದಾರೆ.
ಆದರೆ ರಮಣದೀಪ್ ಸಿಂಗ್ ಅವರಿಗೆ ಯಾವ ತಪ್ಪಿಗೆ ದಂಡ ವಿಧಿಸಲಾಗಿದೆ ಎಂಬುದು ತಿಳಿದಿಲ್ಲ. ಆರ್ಟಿಕಲ್ 2.20 ಪ್ರಕಾರ ಕ್ರಿಕೆಟ್ ಹೊರಗಿನ ಅಹಿತಕರ ನಡುವಳಿಕೆಯಿಂದ ಅಂದರೆ ವಿಕೆಟ್ಗಳನ್ನು ಒದೆಯುವುದು, ಅಥವಾ ಡ್ರೆಸ್ಸಿಂಗ್ ರೂಮ್ ಬಾಗಿಲುಗಳು, ಕನ್ನಡಿಗಳು, ಕಿಟಕಿಗಳಿಗೆ ಹಾನಿ ಮಾಡಿದ್ದು ಕಂಡುಬಂದಲ್ಲಿ ಈ ಶಿಕ್ಷೆಗೆ ಒಳಪಡಿಸಲಾಗುತ್ತದೆ.