ಲಕ್ನೋ:ಭಾನುವಾರ ರಾತ್ರಿ ನಡೆದ ಐಪಿಎಲ್ನ 54ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಸರ್ವಾಂಗೀಣ ಪ್ರದರ್ಶನ ತೋರಿ ವಿಜಯ ಪತಾಕೆ ಹಾರಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ 8ನೇ ಗೆಲುವು ಸಾಧಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಇದೇ ವೇಳೆ ಪ್ಲೇ ಆಫ್ ಸ್ಥಾನವನ್ನೂ ಬಹುತೇಕ ಖಚಿತಪಡಿಸಿಕೊಂಡಿದೆ. ಮತ್ತೊಂದೆಡೆ, ಲಕ್ನೋ ಒಂದು ಸ್ಥಾನ ಕುಸಿದು ಐದನೇ ಸ್ಥಾನದಲ್ಲಿದೆ.
ಲಕ್ನೋದ ಏಕನಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕೋಲ್ಕತ್ತಾ ನೀಡಿದ್ದ 236 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಲಕ್ನೋ 16.1 ಓವರ್‌ಗಳಲ್ಲಿ 137 ರನ್‌ಗಳಿಗೆ ಸರ್ವಪತನ ಕಂಡಿತು. ಲಕ್ನೋ ಪರ ಮಾರ್ಕಸ್ ಸ್ಟೋನಿಸ್ (36) ಹೈ ಸ್ಕೋರರ್ ಎನಿಸಿಕೊಂಡರು. ನಾಯಕ ಕೆ.ಎಲ್.ರಾಹುಲ್ 25 ರನ್ ಗಳಿಸಿದರು. ಈ ಇಬ್ಬರ ಹೊರತಾಗಿ ಯಾವೊಬ್ಬ ಬ್ಯಾಟರ್ ಕೂಡಾ 20 ರನ್‌ಗಳಿಸಲು ಸಾಧ್ಯವಾಗದೆ ತಂಡ 98 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ ತಲಾ 3 ವಿಕೆಟ್ ಪಡೆದರೆ, ಆಂಡ್ರೆ ರಸೆಲ್ 2 ವಿಕೆಟ್ ಕಬಳಿಸಿದರು.