ವಿಶಾಖಪಟ್ಟಣಂ(ಆಂಧ್ರಪ್ರದೇಶ): ಐಪಿಎಲ್ ಟೂರ್ನಿಯ ಇತಿಹಾಸದಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಇಂದು ಹೊಸ ದಾಖಲೆ ನಿರ್ಮಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 272 ರನ್ಗಳನ್ನು ಕೆಕೆಆರ್ ಬ್ಯಾಟರ್ಗಳು ಪೇರಿಸಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಎರಡನೇ ಬಾರಿಗೆ ಅತ್ಯಧಿಕ ರನ್ ಬಾರಿಸಿದ ತಂಡವಾಗಿ ಕೋಲ್ಕತ್ತಾ ಹೊರಹಮ್ಮಿದೆ. ಇದೇ ಆವೃತ್ತಿಯಲ್ಲಿ ಮುಂಬೈ ವಿರುದ್ಧ ಹೈದರಾಬಾದ್ ತಂಡ 277 ರನ್ಗಳನ್ನು ಹೊಡೆದು ಅತೀ ಹೆಚ್ಚು ರನ್ ದಾಖಲೆ ಬರೆದಿತ್ತು.
ಇಂದು ವಿಶಾಖಪಟ್ಟಣಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರಂಭದಲ್ಲೇ ಬ್ಯಾಟರ್ಗಳು ಡೆಲ್ಲಿ ಬೌಲರ್ಗಳ ಮೇಲೆ ದಂಡೆತ್ತಿ ಹೋದರು. ಆರಂಭಿಕರಾದ ಫಿಲಿಪ್ ಸಾಲ್ಟ್ ಮತ್ತು ಸುನಿಲ್ ನರೈನ್ ಮೊದಲ ವಿಕೆಟ್ಗೆ 4.3 ಓವರ್ಗಳಲ್ಲೇ 60 ರನ್ ಬಾರಿಸಿ ಉತ್ತಮ ಆರಂಭ ಒದಗಿಸಿದರು.
18 ರನ್ ಗಳಿಸಿದ್ದ ಫಿಲಿಪ್ ಸಾಲ್ಟ್ ವಿಕೆಟ್ ಪಡೆಯುವ ಮೂಲಕ ಅನ್ರಿಚ್ ನಾರ್ಟ್ಜೆ ಈ ಜೋಡಿಯನ್ನು ಬೇರ್ಪಡಿಸಿದರು. ನಂತರ ಸುನಿಲ್ ನರೈನ್ ಜತೆಗೂಡಿದ ಅಂಗ್ಕ್ರಿಶ್ ರಘುವಂಶಿ ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಹೊಡಿ-ಬಡಿ ಆಟದ ಮೊರೆಹೋದ ಈ ಇಬ್ಬರು ಆಟಗಾರರು ಎರಡನೇ ವಿಕೆಟ್ಗೆ 104 ರನ್ಗಳ ಜತೆಯಾಟ ನೀಡಿದರು. ಅದರಲ್ಲೂ, ಸುನಿಲ್ ನರೈನ್ ಕೇವಲ 39 ಎಸೆತಗಳಲ್ಲಿ ತಲಾ ಏಳು ಸಿಕ್ಸರ್, ಬೌಂಡರಿಗಳ ಸಮೇತವಾಗಿ 85 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.