ನವದೆಹಲಿ:ಜಿಂಬಾಬ್ವೆ ವಿರುದ್ಧದ ಟಿ-20 ಸರಣಿ ಜಯಿಸಿರುವ ಭಾರತ ಮುಂದಿನ ಪ್ರವಾಸವನ್ನು ಶ್ರೀಲಂಕಾಕ್ಕೆ ಕೈಗೊಳ್ಳಲಿದೆ. ಎರಡು ದಿನಗಳ ಹಿಂದಷ್ಟೇ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿತ್ತು. ಜುಲೈ 26 ರಿಂದ ಟಿ-20, ಏಕದಿನ ಸರಣಿ ಆರಂಭವಾಗಲಿತ್ತು. ಆದರೆ, ಇದೀಗ ಸರಣಿಯ ದಿನಾಂಕವನ್ನು ದಿಢೀರ್ ಆಗಿ ಪರಿಷ್ಕರಿಸಲಾಗಿದೆ. ಜುಲೈ 26 ರ ಬದಲಾಗಿ ಜುಲೈ 27 ಕ್ಕೆ ಸರಣಿ ಆರಂಭವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶನಿವಾರ ಪ್ರಕಟಿಸಿದೆ.
ಟೀಮ್ ಇಂಡಿಯಾವು ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಮೂರು ಟಿ20 ಪಂದ್ಯಗಳನ್ನು ಮತ್ತು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಮೂರು ಏಕದಿನಗಳನ್ನು ಆಡಲಿದೆ. ಮೊದಲು ನಿಗದಿ ಮಾಡಿದಂತೆ ಜುಲೈ 26 ರಿಂದ ಟಿ20 ಸರಣಿ ಆರಂಭವಾಗಬೇಕಿತ್ತು. ಪರಿಷ್ಕೃತ ವೇಳಾಪಟ್ಟಿಯಲ್ಲಿ ಒಂದು ದಿನ ತಡವಾಗಿ ಅಂದರೆ, ಜುಲೈ 27ರಂದು ಮೊದಲ ಟಿ-20 ಪಂದ್ಯ ಆರಂಭವಾಗಲಿದೆ. ಎರಡನೇ ಟಿ20 ಜುಲೈ 28ರಂದು ಹಾಗೂ ಮೂರನೇ ಹಾಗೂ ಅಂತಿಮ ಪಂದ್ಯ ಜುಲೈ 30 ರಂದು ನಡೆಯಲಿದೆ.
ಏಕದಿನದಲ್ಲೂ ಬದಲಾವಣೆ:ಟಿ-20 ಅಲ್ಲದೇ ಏಕದಿನ ಸರಣಿಯ ಪಂದ್ಯವೂ ಒಂದು ದಿನ ಮುಂದೂಡಲಾಗಿದೆ. ಮೊದಲು ನಿಗದಿ ಮಾಡಿದಂತೆ ಆಗಸ್ಟ್ 1 ರಂದು ಮೊದಲ ಏಕದಿನ ಕೊಲಂಬೋದಲ್ಲಿ ನಡೆಯಬೇಕಿತ್ತು. ಆದರೆ, ಈಗ ಆಗಸ್ಟ್ 2 ರಂದು ಪ್ರಾರಂಭವಾಗಲಿದೆ. ನಂತರ ಉಳಿದ ಪಂದ್ಯಗಳು ಆಗಸ್ಟ್ 4 ಮತ್ತು ಆಗಸ್ಟ್ 7 ರಂದು ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿವೆ. ವೇಳಾಪಟ್ಟಿ ಬದಲಾವಣೆ ಮಾಡಿದ ಬಗ್ಗೆ ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ದಿನಾಂಕ ಬದಲಾವಣೆ ಮಾಡಿದ ಬಗ್ಗೆ ತಿಳಿಸಲಾಗಿದ್ದು, ಇದಕ್ಕೆ ಕಾರಣ ಏನೆಂಬುದನ್ನು ವಿವರಿಸಿಲ್ಲ.