ನವದೆಹಲಿ/ ಹೈದರಾಬಾದ್: ಒಮಾನ್ನ ಮಸ್ಕಟ್ನಲ್ಲಿ ನಾಳೆಯಿಂದ ಜ.27ರ ವರೆಗೆ ನಡೆಯಲಿರುವ ಎಫ್‌ಐಎಚ್ ಹಾಕಿ 5ಎಸ್ ಮಹಿಳಾ ವಿಶ್ವಕಪ್‌ನಲ್ಲಿ ಆಡಲು ಭಾರತೀಯ ಮಹಿಳಾ ತಂಡ ಸಿದ್ಧವಾಗಿದೆ. ಭಾರತ ತಂಡವು ಅಮೆರಿಕ, ಪೋಲೆಂಡ್ ಮತ್ತು ನಮೀಬಿಯಾದೊಂದಿಗೆ ' ಸಿ' ಗುಂಪಿನಲ್ಲಿದೆ. ಇನ್ನು ನೆದರ್ಲೆಂಡ್, ಮಲೇಷ್ಯಾ, ಫಿಜಿ ಮತ್ತು ಆತಿಥೇಯ ಒಮಾನ್ 'ಎ' ಗುಂಪು ಹಾಗೂ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಉಕ್ರೇನ್ ಮತ್ತು ಜಾಂಬಿಯಾ 'ಬಿ' ಗುಂಪಿನಲ್ಲಿವೆ. ನ್ಯೂಜಿಲೆಂಡ್, ಉರುಗ್ವೆ, ಥೈಲ್ಯಾಂಡ್ ಮತ್ತು ಪರಾಗ್ವೆ 'ಡಿ' ಗುಂಪಿನಲ್ಲಿವೆ.
ಭಾರತ ತನ್ನ ಮೊದಲ ಪಂದ್ಯವನ್ನು ಜನವರಿ 24 ರಂದು ಪೋಲೆಂಡ್ ವಿರುದ್ಧ ಆಡಲಿದ್ದು, ಅದೇ ದಿನ ರಾತ್ರಿ 9.10ಕ್ಕೆ ಅಮೆರಿಕದ ವಿರುದ್ಧ ಸೆಣಸಲಿದೆ. ಭಾರತ ತನ್ನ ಕೊನೆಯ ಗ್ರೂಪ್ ಪಂದ್ಯವನ್ನು ಜನವರಿ 25 ರಂದು ಮಧ್ಯಾಹ್ನ 2.30ಕ್ಕೆ ನಮೀಬಿಯಾ ವಿರುದ್ಧ ಆಡಲಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಜನವರಿ 26 ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಸೆಣಸಾಡಲಿವೆ. ಸೆಮಿಫೈನಲ್ ಪಂದ್ಯಗಳು ಅದೇ ದಿನ ನಡೆಯಲಿದ್ದು, ಫೈನಲ್ ಪಂದ್ಯ ಜನವರಿ 27 ರಂದು ನಡೆಯಲಿದೆ.
ಭಾರತ ತಂಡವನ್ನು ಅನುಭವಿ ಗೋಲ್ ಕೀಪರ್ ರಜನಿ ಎಟಿಮಾರ್ಪು ಮುನ್ನಡೆಸಲಿದ್ದು, ಡಿಫೆಂಡರ್ ಮಹಿಮಾ ಚೌಧರಿ ಉಪನಾಯಕರಾಗಿದ್ದಾರೆ. ತಂಡದಲ್ಲಿ ಎರಡನೇ ಗೋಲ್ ಕೀಪರ್ ಆಗಿ ಬನ್ಸಾರಿ ಸೋಲಂಕಿ, ಡಿಫೆಂಡರ್ಗಳಾಗಿ ಅಕ್ಷತಾ ಅಬಾಸೊ ಧೆಕಾಲೆ ಮತ್ತು ಜ್ಯೋತಿ ಛತ್ರಿ ಇದ್ದಾರೆ. ಮಿಡ್ ಫೀಲ್ಡರ್ಗಳಾಗಿ ಮರಿಯಾನಾ ಕುಜುರ್ ಮತ್ತು ಮುಮ್ತಾಜ್ ಖಾನ್ ಸ್ಥಾನ ಪಡೆದಿದ್ದಾರೆ. ಅಜ್ಮಿನಾ ಕುಜುರ್, ರುತಾಜಾ ದಾದಾಸೊ ಪಿಸಾಲ್ ಮತ್ತು ದೀಪಿಕಾ ಸೊರೆಂಗ್ ಫಾರ್ವರ್ಡ್ ಆಟಗಾರ್ತಿಯರಾಗಿ ಇದ್ದಾರೆ.