ಹೈದರಾಬಾದ್ (ತೆಲಂಗಾಣ):17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಮಿಂಚುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿರ್ಣಾಯಕ ಕದನಕ್ಕೆ ಸಜ್ಜಾಗಿದೆ. ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಇಂದು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯವನ್ನು ಗೆದ್ದು ಪ್ಲೇ ಆಫ್‌ಗೆ ಎಂಟ್ರಿ ಕೊಡುವ ತವಕದಲ್ಲಿ ಇದೆ.
ಪ್ರಸ್ತುತ ಟೂರ್ನಿಯಲ್ಲಿ ಸನ್‌ರೈಸರ್ಸ್ ಇದುವರೆಗೆ 12 ಪಂದ್ಯಗಳನ್ನಾಡಿದೆ. ಈ ಪೈಕಿ 7 ಪಂದ್ಯಗಳಲ್ಲಿ ಗೆದ್ದು 14 ಅಂಕಗಳನ್ನು ಹೊಂದಿದೆ. ಸದ್ಯ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಹೈದರಾಬಾದ್ ತಂಡಕ್ಕೆ ಪ್ಲೇಆಫ್‌ಗೆ ಪ್ರವೇಶಿಸಲು ಕೇವಲ ಒಂದು ಅಂಕ ಮಾತ್ರ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಗುಜರಾತ್ ವಿರುದ್ಧ ಗೆಲುವಿನೊಂದಿಗೆ ಸನ್‌ರೈಸರ್ಸ್ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ಪ್ಲೇ ಆಫ್‌ಗೆ ತಲುಪಲು ತೀರ್ಮಾನಿಸಿದೆ.
ಈ ಪಂದ್ಯದಲ್ಲಿ ಸೋತರೂ ಹೈದರಾಬಾದ್ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಆದರೆ, ಲೀಗ್ ಹಂತದ ಕೊನೆಯ ಎರಡು ಪಂದ್ಯಗಳನ್ನು ಗೆದ್ದು ಟಾಪ್ 2ರಲ್ಲಿ ಸ್ಥಾನ ಪಡೆಯುವ ಗುರಿಯೊಂದಿಗೆ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಮಿಂಚಿನ ಬ್ಯಾಟಿಂಗ್ನಿಂದ ಬಲಿಷ್ಠವಾಗಿರುವ ಸನ್‌ರೈಸರ್ಸ್ ತಂಡಕ್ಕೆ ತವರು ನೆಲದಲ್ಲಿ ತಡೆವೊಡ್ಡುವುದು ಸಹ ಗುಜರಾತ್ ಟೈಟಾನ್ಸ್ಗೆ ಸವಾಲೇ ಸರಿ. ಮೇ 8ರಂದು ಇದೇ ಮೈದಾನದಲ್ಲಿ ನಡೆದ ಲಖನೌ ವಿರುದ್ಧದ ಪಂದ್ಯದಲ್ಲಿ 166 ರನ್‌ಗಳ ಗುರಿಯನ್ನು ಒಂದೂ ವಿಕೆಟ್ ನಷ್ಟವಿಲ್ಲದೇ, ಕೇವಲ 9.4 ಓವರ್‌ಗಳಲ್ಲಿ ಹೈದರಾಬಾದ್ ಸಾಧಿಸಿತ್ತು.