Indian national anthem in Pakistan : ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಗಿ ಇಂದಿಗೆ 4 ದಿನಗಳಾಗಿದೆ. ಈಗಾಗಲೇ ಮೂರು ಪಂದ್ಯಗಳು ಮುಕ್ತಾಯಗೊಂಡಿದ್ದು, ಇಂದು ಟೂರ್ನಿಯ ನಾಲ್ಕನೇ ಪಂದ್ಯ ನಡೆಯುತ್ತಿದೆ.
ಈ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಿದ್ದು, ಪಾಕಿಸ್ತಾನದ ಗಡಾಫಿ ಮೈದಾನ ಆತಿಥ್ಯ ವಹಿಸಿಕೊಂಡಿದೆ. ಐಸಿಸಿ ನಿಯಮದಂತೆ ಪಂದ್ಯ ಪ್ರಾರಂಭಕ್ಕೂ ಮೊದಲು ಉಭಯ ತಂಡಗಳ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಲಾಗುತ್ತದೆ.
ಆದರೆ ಪಿಸಿಬಿ ಎಡವಟ್ಟು ಮಾಡಿದ್ದರಿಂದ ಲಾಹೋರ್ ಮೈದಾನದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿದೆ. ಹೌದು, ಆಸ್ಟ್ರೇಲಿಯಾದ ರಾಷ್ಟ್ರಗೀತೆ ಪ್ರಸಾರ ಮಾಡುವ ಬದಲು ಭಾರತದ ರಾಷ್ಟ್ರಗೀತೆ ಪ್ರಸಾರವಾಗಿದೆ. ಎರಡು ಸೆಕೆಂಡ್ಗಳ ಕಾಲ ಪ್ಲೇ ಮಾಡಲಾಗಿದೆ. 'ಭಾರತ ಭಾಗ್ಯವಿದಾತ' ಎಂದು ಕೇಳಿಸಿದೆ. ಇದರ ಬೆನ್ನಲ್ಲೇ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಕೆಲವರು ಇದು ಪಾಕಿಸ್ತಾನ ವಿರುದ್ಧ ನಡೆಯಲಿರುವ ಭಾರತ ಪಂದ್ಯ ಗೆಲುವಿನ ಸಂಕೇತವಾಗಿದೆ ಎಂದಿದ್ದಾರೆ. ಮತ್ತೆ ಕೆಲವರು ನಾಳೆಯ ಪಂದ್ಯ ದುಬೈನಲ್ಲಿ ನಡೆಯುತ್ತಿದೆ ಎಂದು ಕಾಲೆಳೆದಿದ್ದಾರೆ. ಪಾಕಿಸ್ತಾನ ಭಾರತೀಯರನ್ನು ರಂಜಿಸುವುದರಲ್ಲಿ ಸದಾ ಮುಂದಿರುತ್ತದೆ ಎಂದು ನೆಟ್ಟಿಗರು ಕಾಮೆಂಟ್ಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಭಾರತ ದುಬೈನಲ್ಲಿದ್ದರು ಪಾಕ್ನಲ್ಲಿ ರಾಷ್ಟ್ರಗೀತೆ ಮೊಳಗುತ್ತಿದೆ. ಇದು ಭಾರತದ ಗತ್ತು ಎಂದಿದ್ದಾರೆ.
ಧ್ವಜ ವಿವಾದ : ಇದಕ್ಕೂ ಮುನ್ನ, ಪಂದ್ಯಾವಳಿ ಪ್ರಾರಂಭಕ್ಕೂ ಮುನ್ನ ಪಾಕ್ಕಿಸ್ತಾನದ ಮೈದಾನಗಳಲ್ಲಿ ಭಾರತದ ಧ್ವಜವನ್ನು ಹಾರಿಸದೆ ಟೀಕೆಗೆ ಗುರಿಯಾಗಿತ್ತು. ಸಮಾನ್ಯವಾಗಿ ಐಸಿಸಿ ಆಯೋಜಿತ ಟೂರ್ನಿಗಳನ್ನು ಹೋಸ್ಟ್ ಮಾಡುವ ರಾಷ್ಟ್ರವು, ಪಂದ್ಯಗಳು ನಡೆಯುವ ಎಲ್ಲಾ ಮೈದಾನಗಳಲ್ಲಿ ಟೂರ್ನಿಯಲ್ಲಿ ಭಾಗಿಯಾಗುವ ತಂಡಗಳ ರಾಷ್ಟ್ರಧ್ವಜವನ್ನು ಪ್ರದರ್ಶಿಸಬೇಕು.