ಪ್ಯಾರಿಸ್ (ಫ್ರಾನ್ಸ್):ಒಲಿಂಪಿಕ್ಸ್ನಲ್ಲಿ ಭಾರತ ಹಾಕಿ ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ಭಾನುವಾರ ಗ್ರೇಟ್ ಬ್ರಿಟನ್ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ಮಿಂಚಿದ ಭಾರತ, ಶೂಟೌಟ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸೆಮಿ-ಫೈನಲ್ಗೆ ಲಗ್ಗೆ ಇಟ್ಟಿದೆ. ಆದರೇ ಸೆಮಿ ಫೈನಲ್ ಪಂದ್ಯ ಆರಂಭಕ್ಕೂ ಮುನ್ನವೇ ಭಾರತ ಹಾಕಿ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ.
ನಿನ್ನೆಯ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಅಮಿತ್ ರೋಹಿದಾಸ್ ಹಾಕಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪಂದ್ಯದ ಮಧ್ಯದಲ್ಲೇ ರೆಡ್ ಕಾರ್ಡ್ ನೀಡಿ ನಿಷೇಧ ವಿಧಿಸಲಾಗಿತ್ತು. ಇದೀಗ ಮಂಗಳವಾರ (ನಾಳೆ) ಜರ್ಮನಿ ವಿರುದ್ಧ ನಡೆಯಲಿರುವ ಭಾರತದ ಸೆಮಿಫೈನಲ್ ಪಂದ್ಯಕ್ಕೂ ಅವರಿಗೆ ಆಡಲು ಅನುಮತಿ ನಿರಾಕರಿಸಲಾಗಿದೆ.
ಅಂತರರಾಷ್ಟ್ರೀಯ ಹಾಕಿ ಫೆಡರೇಶನ್‌ನ ಹೇಳಿಕೆಯ ಪ್ರಕಾರ, 'ಆಗಸ್ಟ್ 4 ರಂದು ಭಾರತ ಮತ್ತು ಗ್ರೇಟ್ ಬ್ರಿಟನ್ ಪಂದ್ಯದ ವೇಳೆ ನೀತಿ ಸಂಹಿತೆ ಉಲ್ಲಂಘನೆಗಾಗಿ ಎಫ್‌ಐಹೆಚ್ ಅಮಿತ್ ರೋಹಿದಾಸ್ ಅವರನ್ನು ಪಂದ್ಯದಿಂದ ಅಮಾನತುಗೊಳಿಸಿತ್ತು. ಇದರ ಪರಿಣಾಮ 35ನೇ ಪಂದ್ಯ (ಜರ್ಮನಿ Vs ಭಾರತದ ಸೆಮಿಫೈನಲ್)ದ ಮೇಲೂ ಬೀರುತ್ತದೆ. ಅಂದರೆ ಮುಂದಿನ ಪಂದ್ಯಕೂ ಅಮಿತ್ ರೋಹಿದಾಸ್ ಭಾಗವಹಿಸುವುದಿಲ್ಲ. ಈ ಹಿನ್ನೆಲೆ ನಾಳೆಯ ಪಂದ್ಯಕ್ಕೆ ಭಾರತ ಕೇವಲ 15 ಆಟಗಾರರ ತಂಡವನ್ನು ಹೊಂದಿರಲಿದೆ.
ಗ್ರೇಟ್ ಬ್ರಿಟನ್ ವಿರುದ್ಧದ ಕ್ವಾರ್ಟರ್-ಫೈನಲ್ ಪಂದ್ಯದ ಎರಡನೇ ಕ್ವಾರ್ಟರ್‌ನಲ್ಲಿ, ಅಮಿತ್ ರೋಹಿದಾಸ್ ಬ್ರಿಟನ್ನ ವಿಲ್ ಕ್ಯಾಲನನ್ ಬಾಲ್ ಫಾರ್ವರ್ಡ್ ಅನ್ನು ತಪ್ಪಿಸಲು ಪ್ರಯತ್ನಿಸುವ ವೇಳೆ, ರೋಹಿದಾಸ್ ಅವರ ಹಾಕಿ ಸ್ಟಿಕ್ ಕ್ಯಾಲನನ್ ಮುಖಕ್ಕೆ ತಾಕಿತ್ತು. ಪರಿಣಾಮ ಆನ್-ಫೀಲ್ಡ್ ರೆಫರಿ ಇದನ್ನು ಹಾಕಿ ನೀತಿ ಸಂಹಿತೆ ಉಲ್ಲಂಘನೆಯಡಿ ಪರಿಗಣಿಸಿ ರೋಹಿದಾಸ್ಗೆ ರೆಡ್ ಕಾರ್ಡ್ ನೀಡಿ ಪಂದ್ಯದ ಮಧ್ಯದಲ್ಲೇ ನಿಷೇಧ ಹೇರಲಾಯಿತು. ಇದರಿಂದ ಭಾರತ 10 ಆಟಗಾರರೊಂದಿಗೆ ಉಳಿದ ಪಂದ್ಯವನ್ನು ಆಡಿತ್ತು.
ಈ ಪಂದ್ಯದಲ್ಲಿ ಭಾರತ ಮತ್ತು ಗ್ರೇಟ್ ಬ್ರಿಟನ್ 1-1 ಅಂತರದಿಂದ ಸಮಬಲ ಸಾಧಿಸಿತ್ತು. ಬಳಿಕ ಕ್ವಾರ್ಟರ್‌ಫೈನಲ್ ಪಂದ್ಯವು ಶೂಟೌಟ್ ಹಂತಕ್ಕೆ ತಲುಪಿತು. ಇದರಲ್ಲಿ ಭಾರತ 4-2 ಅಂತರದಿಂದ ಬ್ರಿಟನ್ ಅನ್ನು ಸೋಲಿಸಿತು. ಹರ್ಮನ್‌ಪ್ರೀತ್ ಸಿಂಗ್ ಭಾರತದ ಪರ ಮೊದಲ ಗೋಲು ದಾಖಲಿಸಿದರೆ, ಸುಖಜಿತ್ ಸಿಂಗ್ ಎರಡನೇ ಗೋಲು, ಮೂರನೇ ಗೋಲು ಲಲಿತ್ ಕುಮಾರ್ ಉಪಾಧ್ಯಾಯ ದಾಖಲಿಸಿದರು.
ಕಳೆದ ವರ್ಷವೂ ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್‌ನ ಸೆಮಿಫೈನಲ್‌ಗೆ ತಲುಪಿತ್ತು, ಅಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತ್ತು. ಇದೀಗ ಭಾರತ ಸೆಮಿಫೈನಲ್‌ನಲ್ಲಿ ಜರ್ಮನಿಯನ್ನು ಎದುರಿಸಲಿದೆ.
ಇದನ್ನೂ ಓದಿ:ಟೆನಿಸ್ ಸಿಂಗಲ್ಸ್ನಲ್ಲಿ ನೊವಾಕ್ ಜೊಕೊವಿಕ್ಗೆ ಒಲಿಂಪಿಕ್ನ ಮೊದಲ ಚಿನ್ನ; ಅಲ್ಕರಾಜ್ಗೆ ರಜತ ಪದಕ - Djokovic Clinches Gold Medal