Indian Flag Controversy In Pakistan: ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಾರಂಭಕ್ಕೆ ಇನ್ನು ಎರಡು ದಿನಗಳು ಮಾತ್ರ ಬಾಕಿ ಉಳಿದಿದೆ. ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯುತ್ತಿರುವ ಈ ಟೂರ್ನಿಗಾಗಿ ಮೈದಾನಗಳು ಸಜ್ಜುಗೊಂಡಿವೆ. ಭಾರತ ಹೊರತುಪಡಿಸಿ ಏಳು ತಂಡಗಳ ಪಂದ್ಯ ಪಾಕಿಸ್ತಾನದಲ್ಲಿ ನಡೆಯಲಿವೆ. ಭಾರತದ ಪಂದ್ಯಗಳನ್ನು ಮಾತ್ರ ದುಬೈನಲ್ಲಿ ಆಯೋಜಿಸಲಾಗುತ್ತಿದೆ.
ಈಗಾಗಲೆ ಏಳು ತಂಡಗಳು ಪಾಕಿಸ್ತಾನಕ್ಕೆ ತೆರಳಿದ್ದು, ಭಾರತದ ಆಟಗಾರರು ಕೂಡ ದುಬೈಗೆ ತೆರಳಿ ಅಭ್ಯಾಸ ಪ್ರಾರಂಭಿಸಿದ್ದಾರೆ. ಫೆ.19ಕ್ಕೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ಮೂಲಕ ಮಹಾ ಟೂರ್ನಿ ಪ್ರಾರಂಭಗೊಳ್ಳಲಿದೆ. ಏತನ್ಮಧ್ಯೆ, ಪಂದ್ಯಾವಳಿ ಪ್ರಾರಂಭಕ್ಕೂ ಮೊದಲೇ ಪಾಕಿಸ್ತಾನ ನರಿಬುದ್ಧಿ ತೋರಿಸಿರುವ ಘಟನೆ ನಡೆದಿದ್ದು ಭಾರತೀಯ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿರುವುದು ಗೊತ್ತೇ ಇದೆ. ಅದರಂತೆ ಕರಾಚಿ, ಲಾಹೋರ್, ರಾವಲ್ಪಿಂಡಿ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ನಿಯಮದಂತೆ ಯಾವುದೇ ರಾಷ್ಟ್ರ ಐಸಿಸಿ ಟೂರ್ನಿಗಳನ್ನು ಆಯೋಜಿಸಿದರೆ ಅದರಲ್ಲಿ ಭಾಗಿಯಾಗಲಿರುವ ತಂಡಗಳ ರಾಷ್ಟ್ರೀಯ ಧ್ವಜಗಳನ್ನು ಪಂದ್ಯಗಳು ನಡೆಯುವ ಮೈದಾನಗಳಲ್ಲಿ ಪ್ರದರ್ಶಿಸಲಾಗುತ್ತದೆ. ಆದರೆ ಪಾಕಿಸ್ತಾನ ಏಳು ದೇಶಗಳ ಧ್ವಜವನ್ನು ಮಾತ್ರ ಮೈದಾನಗಳಲ್ಲಿ ಪ್ರದರ್ಶಿಸುತ್ತಿದ್ದು ಭಾರತದ ಧ್ವಜವನ್ನು ತೆಗೆದು ಹಾಕಿದೆ.
ಫ್ಯಾನ್ಸ್ ಗರಂ: ಇದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಷಯವಾಗಿ ಹಲವಾರು ಕ್ರಿಕೆಟ್‌ಪ್ರಿಯರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಉದ್ದೇಶಪೂರ್ವಕವಾಗಿ ಇದನ್ನು ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೂ ಮೊದಲೇ ಭಾರತ ತಂಡಕ್ಕೆ ಮಾತ್ರವಲ್ಲ ಧ್ವಜಕ್ಕೂ ಹೆದರಿದ ಪಾಕಿಸ್ತಾನ ಎಂದು ಕೆಲವರು ಟೀಕಿಸಿದ್ದಾರೆ. ಮತ್ತೆ ಕೆಲವರು ಭಾರತ ಧ್ವಜವನ್ನು ಖರೀದಿಸುವಷ್ಟು ದುಡ್ಡು ಪಾಕಿಸ್ತಾನದ ಬಳಿ ಇಲ್ಲ ಎಂದು ಚಾಟಿ ಬೀಸಿದ್ದಾರೆ.