ನಾರ್ಥ್ಸೌಂಡ್(ಆ್ಯಂಟಿಗುವ): ಟಿ20 ವಿಶ್ವಕಪ್ನ ಸೂಪರ್-8ರ ಏಳನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿದ್ದು, ಸೆಮಿಫೈನಲ್‌ಗೆ ಸನಿಹವಾಗಿದೆ.
ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ಹಾರ್ದಿಕ್ ಪಾಂಡ್ಯರ ಅಜೇಯ ಅರ್ಧಶತಕದ ಬಲದಿಂದ 196 ರನ್ ಕಲೆಹಾಕಿತು. ಇದಕ್ಕುತ್ತರವಾಗಿ, ಬಾಂಗ್ಲಾ ತಂಡ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ 146 ರನ್‌ಗಳಿಗೆ ಇನಿಂಗ್ಸ್ ಮುಗಿಸಿತು. ಅಂತಿಮವಾಗಿ ಭಾರತ 50 ರನ್ಗಳಿಂದ ಪಂದ್ಯ ಜಯಿಸಿತು.
ಈ ಗೆಲುವಿನೊಂದಿಗೆ 4 ಅಂಕಗಳನ್ನು ಪಡೆಯುವ ಮೂಲಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸೂಪರ್ 8 ಗ್ರೂಪ್ 1ರಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಬಾಂಗ್ಲಾದೇಶ ಇನ್ನಿಂಗ್ಸ್:ಭಾರತ ನೀಡಿದ ಗುರಿ ಬೆನ್ನಟ್ಟಿದ ಬಾಂಗ್ಲಾಉತ್ತಮ ಆರಂಭವನ್ನೇನೋ ಪಡೆಯಿತು. ಆದರೆ ತಂಡದ ಸ್ಕೋರ್ 35 ಆಗಿದ್ದಾಗ ಆರಂಭಿಕ ಬೌಲರ್ ಲಿಟನ್ ದಾಸ್ (13) ಆಟಕ್ಕೆ ಹಾರ್ದಿಕ್ ಪಾಂಡ್ಯ ಕಡಿವಾಣ ಹಾಕಿದರು. ಇದಾದ ಬಳಿಕ ತಂಜೀದ್ ಹಸನ್ ಮತ್ತು ನಜ್ಮುಲ್ ಹುಸೇನ್ ಶಾಂಟೊ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ, ಮುಂದೆ ಈ ಜೋಡಿ ನಿರ್ಗಮಿಸಿದ ನಂತರ ತಂಡದ ಬ್ಯಾಟಿಂಗ್ ಬಲ ಕುಸಿಯುತ್ತಾ ಸಾಗಿತು.