ಕರ್ನಾಟಕ

karnataka

ETV Bharat / sports

ಮಹಿಳಾ ಟೆಸ್ಟ್​ನಲ್ಲಿ ಭಾರತದ ಚಾರಿತ್ರಿಕ ಸಾಧನೆ: ಮೊದಲ ದಿನವೇ 525 ರನ್​ ಶಿಖರ! ಶಫಾಲಿ, ಸ್ಮೃತಿ ಅಬ್ಬರಕ್ಕೆ ದಾಖಲೆಗಳು ಪುಡಿಪುಡಿ! - India vs South Africa Test - INDIA VS SOUTH AFRICA TEST

ಚೆನ್ನೈನ ಚೆಪಾಕ್​ ಮೈದಾನದಲ್ಲಿ ಇಂದು ಭಾರತೀಯ ವನಿತೆಯರು ಹಲವು ದಾಖಲೆಗಳನ್ನು ಪುಡಿಗಟ್ಟಿದರು. ಶಫಾಲಿ ವರ್ಮಾ, ಸ್ಮೃತಿ ಮಂಧಾನ ತಮ್ಮ ಅಬ್ಬರದ ಬ್ಯಾಟಿಂಗ್‌ ಮೂಲಕ ಮಹಿಳಾ ಕ್ರಿಕೆಟ್​ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದರು.

Smriti Mandhana, Shefali Verma
ಸ್ಮೃತಿ ಮಂಧಾನ, ಶಫಾಲಿ ವರ್ಮಾ (IANS)

By PTI

Published : Jun 28, 2024, 6:33 PM IST

Updated : Jun 28, 2024, 6:53 PM IST

ಚೆನ್ನೈ(ತಮಿಳುನಾಡು): ಮಹಿಳಾ ಟೆಸ್ಟ್​​ ಕ್ರಿಕೆಟ್​ನಲ್ಲಿ ಭಾರತೀಯ ವನಿತೆಯರು ಇಂದು ಹೊಸ ಹಾಗೂ ಐತಿಹಾಸಿಕ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ 500 ರನ್​ಗಳ ಬೃಹತ್​ ಮೊತ್ತ ಪೇರಿಸಿದರು.

ಇದಕ್ಕೂ ಮುನ್ನ ಸ್ಟಾರ್​ ಬ್ಯಾಟರ್​ಗಳಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಮೊದಲ ವಿಕೆಟ್‌ಗೆ 192 ರನ್​ ಪೇರಿಸಿ ಅತ್ಯಧಿಕ ಜೊತೆಯಾಟದ ದಾಖಲೆ ಬರೆದರು. ಅಷ್ಟೇ ಅಲ್ಲ, ಶಫಾಲಿ ವರ್ಮಾ ತಮ್ಮ ಚೊಚ್ಚಲ ದ್ವಿಶತಕ ಸಿಡಿಸಿ ಸಂಭ್ರಮಿಸಿದರು. ಇದು ಟೆಸ್ಟ್​ ಇತಿಹಾಸದಲ್ಲೇ ಅತಿವೇಗದ ಡಬಲ್ ಸೆಂಚುರಿಯೂ ಹೌದು!.

ಭಾರತದ ಇನಿಂಗ್ಸ್‌ನ ಸಂಪೂರ್ಣ ವಿವರ: ಇಲ್ಲಿನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಇಂದಿನಿಂದ ಟೆಸ್ಟ್​ ಆರಂಭವಾಗಿದೆ. ಟಾಸ್​ ಗೆದ್ದ ಭಾರತ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್ ಬ್ಯಾಟಿಂಗ್ ಆಯ್ದುಕೊಂಡರು. ನಾಯಕಿಯ ನಿರೀಕ್ಷೆಗೂ ಮೀರಿ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಅದ್ಭುತ ಆರಂಭ ಒದಗಿಸಿದರು. ಇಬ್ಬರೂ ಆಟಗಾರ್ತಿಯರು ತಮ್ಮ ಸದೃಢ ಬ್ಯಾಟಿಂಗ್​ನೊಂದಿಗೆ ಶತಕ ಸಿಡಿಸಿದರು. 38 ಓವರ್​ನ ಕೊನೆಯ ಎಸೆತದಲ್ಲಿ ಶಫಾಲಿ ವರ್ಮಾ ತಮ್ಮ ಮೊದಲ ಟೆಸ್ಟ್​ ಶತಕ ಪೂರೈಸಿದರು. ಇದರ ನಂತರದ ಓವರ್​ನ ಮೊದಲ ಎಸತೆದಲ್ಲೇ ಭರವಸೆಯ ಬ್ಯಾಟರ್​ ಮಂಧಾನ ಸಹ ಸೆಂಚುರಿ ಬಾರಿಸಿದರು. ಇದು ಕಳೆದ 5 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಂಧಾನ ಅವರ ಬ್ಯಾಟ್‌ನಿಂದ​ ಮೂಡಿದ ಬಂದ 4ನೇ ಶತಕವಾಗಿದೆ.

292 ರನ್​ ದಾಖಲೆಯ ಜೊತೆಯಾಟ:ಈ ಆಟಗಾರ್ತಿಯರು ತಮ್ಮ ಶತಕದ ನಂತರವೂ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದರು. ಇದರ ನಡುವೆ 150 ರನ್​ಗಳ ಗಡಿಯಲ್ಲಿ ಸ್ಮೃತಿ ಮಂಧಾನ (149) ವಿಕೆಟ್​ ಒಪ್ಪಿಸಿದರು. ಆದರೆ, ಅವರು ನಿರ್ಗಮಿಸುವ ಮುನ್ನ 26 ಬೌಂಡರಿ ಹಾಗೂ ಒಂದು ಸಿಕ್ಸರ್​ ಸಹಿತ ಆಕರ್ಷಕ ಹಾಗೂ ಸ್ಮರಣೀಯ ಇನಿಂಗ್ಸ್ ಕಟ್ಟಿದರು. ಶಫಾಲಿ ವರ್ಮಾ ಜೊತೆ ಟೆಸ್ಟ್​ನಲ್ಲಿ ಮೊದಲ ವಿಕೆಟ್​ಗೆ ಅತ್ಯಧಿಕ 292 ರನ್​ಗಳ ಜೊತೆಯಾಟದ ದಾಖಲೆ ನಿರ್ಮಿಸಿದರು.

2004ರಲ್ಲಿ ಕರಾಚಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನದ ಸಜ್ಜಿದಾ ಶಾ ಮತ್ತು ಕಿರಣ್ ಬಲೂಚ್ ಮೊದಲ ವಿಕೆಟ್​ಗೆ 241 ರನ್​ಗಳ ಜೊತೆಯಾಟ ಒದಗಿಸಿದ್ದರು. ಇದು ಇದುವರೆಗಿನ ದೊಡ್ಡ ಜೊತೆಯಾಟದ ದಾಖಲೆ. ಈ ದಾಖಲೆಯನ್ನು ಶಫಾಲಿ ಮತ್ತು ಸ್ಮೃತಿ ಅಳಿಸಿ ಹಾಕಿದರು. ಅಲ್ಲದೇ, ಶಫಾಲಿ ಮತ್ತು ಸ್ಮೃತಿ 2021ರಲ್ಲಿ ಬ್ರಿಸ್ಟಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ತಾವೇ ನಿರ್ಮಿಸಿದ್ದ ಆರಂಭಿಕ 167 ರನ್‌ಗಳ ಜೊತೆಯಾಟದ ದಾಖಲೆಯನ್ನೂ ಮೆಟ್ಟಿ ನಿಂತರು.

ಇಷ್ಟೇ ಅಲ್ಲ, ಈ ಜೋಡಿ ಮಹಿಳಾ ಟೆಸ್ಟ್‌ನಲ್ಲಿ ಯಾವುದೇ ವಿಕೆಟ್​ಗೆ ಎರಡನೇ ಅತ್ಯಧಿಕ ಜೊತೆಯಾಟದ ದಾಖಲೆಯನ್ನೂ ಸೃಷ್ಟಿಸಿತು. 1987ರಲ್ಲಿ ವೆದರ್‌ಬಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೂರನೇ ವಿಕೆಟ್‌ಗೆ ಆಸ್ಟ್ರೇಲಿಯಾದ ಎಲ್​ಎ ರೀಲರ್ ಮತ್ತು ಡಿಎ ಆನೆಟ್ಸ್ ಅವರು 309 ರನ್‌ಗಳ ಅತ್ಯಧಿಕ ಜೊತೆಯಾಟ ನೀಡಿದ್ದರು. 2014ರಲ್ಲಿ ಮೈಸೂರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪೂನಮ್ ರಾವುತ್ ಮತ್ತು ತಿರುಶ್ ಕಾಮಿನಿ ಕಲೆ ಹಾಕಿದ್ದ 275 ರನ್ ಭಾರತದ ಅತ್ಯುನ್ನತ ಜೊತೆಯಾಟವನ್ನೂ ಈ ಜೋಡಿ ಮುರಿಯಿತು.

ಶಫಾಲಿ ವರ್ಮಾ ಅತಿ ವೇಗದ ದ್ವಿಶತಕ: ಸ್ಮೃತಿ ಮಂಧಾನ ವಿಕೆಟ್ ಪತನದ ಬಳಿಕವೂ ಶಫಾಲಿ ವರ್ಮಾ ಧೃತಿಗೆಡದೆ ತಮ್ಮ ಬ್ಯಾಟಿಂಗ್​ ಮುಂದುವರೆಸಿದರು. ಮಿಥಾಲಿ ರಾಜ್, ಕಾಮಿನಿ ಮತ್ತು ಸ್ನಾಧ್ಯ ಅಗರ್ವಾಲ್ ನಂತರ 150 ರನ್​ಗಳ ಗಡಿ ನಾಲ್ಕನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಶಫಾಲಿ ಪಾತ್ರರಾದರು. ಮಿಥಾಲಿ ರಾಜ್, ಕಾಮಿನಿ ಮತ್ತು ಸಂಧ್ಯಾ ಅಗರ್ವಾಲ್ ನಂತರ 150ಕ್ಕೂ ಅಧಿಕ ಗಳಿಸಿದ ನಾಲ್ಕನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಶಫಾಲಿ ಪಾತ್ರರಾದರು. ಇಷ್ಟೇ ಅಲ್ಲ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡರು.

20 ವರ್ಷದ ಶಫಾಲಿ ಕೇವಲ 194 ಎಸೆತಗಳಲ್ಲಿ ತಮ್ಮ ದ್ವಿಶತಕ ಗಳಿಸಿದರು. ಈ ಮೂಲಕ ಇದೇ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 248 ಎಸೆತಗಳಲ್ಲಿ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್‌ಲ್ಯಾಂಡ್ ಬಾರಿಸಿದ್ದ ದ್ವಿಶತಕ ದಾಖಲೆ ಮುರಿದರು. ಇದಲ್ಲದೇ, ಟೆಸ್ಟ್ ಕ್ರಿಕೆಟ್‌ನಲ್ಲಿ ಮಾಜಿ ನಾಯಕಿ ಮಿಥಾಲಿ ರಾಜ್ ನಂತರ ದ್ವಿಶತಕ ಸಿಡಿಸಿದ ಎರಡನೇ ಭಾರತೀಯ ಬ್ಯಾಟರ್​ ಎಂಬ ಶಫಾಲಿ ಕೀರ್ತಿಗೂ ಭಾಜನರಾದರು. 2002ರನಲ್ಲಿ ಟೌಂಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ಮಾಜಿ ನಾಯಕಿ ಮಿಥಾಲಿ 407 ಎಸೆತಗಳಲ್ಲಿ 214 ರನ್‌ಗಳನ್ನು ಕಲೆ ಹಾಕಿದ್ದರು. ಅಂತಿಮವಾಗಿ, 197 ಎಸೆತಗಳಲ್ಲಿ 23 ಬೌಂಡರಿಗಳು ಮತ್ತು ಎಂಟು ಸಿಕ್ಸರ್​ಗಳ ಸಮೇತ 205 ರನ್ ಗಳಿಸಿ ಶಫಾಲಿ ರನೌಟ್ ಆಗಿ ತಮ್ಮ ಆಕ್ರಮಣಕಾರಿ ಇನಿಂಗ್ಸ್​ ಮುಗಿಸಿದರು.

ಮೊದಲ ದಿನವೇ 525 ರನ್​ಗಳ ಶಿಖರ!:ಇಂದಿನ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾದ ಆಟಗಾರ್ತಿಯರು 98 ಓವರ್​ಗಳಲ್ಲಿ 525 ರನ್‌ಗಳ ಬೃಹತ್​ ಶಿಖರ ಕಟ್ಟಿದರು. ಇದುವರೆಗೂ ಮಹಿಳಾ ಟೆಸ್ಟ್​ ಕ್ರಿಕೆಟ್‌ನಲ್ಲಿ ಒಂದು ದಿನದಲ್ಲಿ ಗರಿಷ್ಠ 431 ರನ್ ಮಾತ್ರ ಕಲೆ ಹಾಕಲಾಗಿತ್ತು. ಆದರೆ, ಭಾರತೀಯ ವನಿತೆಯರು ಕೇವಲ 4 ವಿಕೆಟ್​ ಕಳೆದುಕೊಂಡು 500 ರನ್‌ಗಳ ಗಡಿ ದಾಟಿ ಐತಿಹಾಸಿಕ ದಿನಕ್ಕೆ ಸಾಕ್ಷಿಯಾದರು.

ಶಫಾಲಿ ವರ್ಮಾ 205, ಸ್ಮೃತಿ ಮಂಧಾನ 149, ಶುಭಾ ಸತೀಶ್ 15, ಜೆಮಿಮಾ ರಾಡ್ರಿಗಸ್ 55 ರನ್​ ಗಳಿಸಿ ವಿಕೆಟ್​ ಒಪ್ಪಿಸಿದ್ದರೆ, ನಾಯಕಿ ಹರ್ಮನ್​ಪ್ರೀತ್​ ಕೌರ್​ 42, ವಿಕೆಟ್​ ಕೀಪರ್​ ರಿಚಾ ಘೋಷ್ 43 ರನ್​ ಬಾರಿಸಿ ನಾಳೆಗೆ ಕ್ರೀಸ್​ ಕಾಯ್ದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಪರ ಡೆಲ್ಮಿ ಟಕರ್ 2 ಹಾಗೂ ನಾಡಿನ್ ಡಿ ಕ್ಲರ್ಕ್ 1 ವಿಕೆಟ್​ ಪಡೆಯಲು ಮಾತ್ರ ಸಫಲರಾದರು.

ಇದನ್ನೂ ಓದಿ:ಫೈನಲ್‌ನಲ್ಲಿ ವಿರಾಟ್​ ದೊಡ್ಡ ಇನ್ನಿಂಗ್ಸ್ ಆಡಲಿದ್ದಾರೆ: ಕೊಹ್ಲಿ ಬೆಂಬಲಿಸಿದ ದ್ರಾವಿಡ್​ - ರೋಹಿತ್​

Last Updated : Jun 28, 2024, 6:53 PM IST

ABOUT THE AUTHOR

...view details