ಹೈದರಾಬಾದ್:ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ 113 ರನ್ಗಳಿಂದ ಗೆಲುವು ಸಾಧಿಸಿ ಸರಣಿಯನ್ನು ವಶಪಡಿಸಿಕೊಂಡಿದೆ. ಇದರೊಂದಿಗೆ 67 ವರ್ಷಗಳ ನಂತರ ಕಿವೀಸ್ ಪಡೆ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. ಅಲ್ಲದೇ ಭಾರತ 12 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಸರಣಿ ಸೋತಿದೆ. ಕಿವೀಸ್ ನೀಡಿದ್ದ 359 ರನ್ಗಳ ಗುರಿಯನ್ನು ಬೆನ್ನತ್ತಿದ ಭಾರತ 245 ರನ್ ಗಳಿಸಿ ಸೋಲೊಪ್ಪಿಕೊಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಿವೀಸ್ 2-0 ಅಂತರದಿಂದ ಸರಣಿ ಕೈವಶ ಪಡಿಸಿಕೊಂಡಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಕಿವೀಸ್ ಮೊದಲ ಇನ್ನಿಂಗ್ಸ್ನಲ್ಲಿ ಕಾನ್ವೆ (76) ಮತ್ತು ರಚಿನ್ ರವೀಂದ್ರ (65) ಬ್ಯಾಟಿಂಗ್ ನೆರವಿನಿಂದ 259 ರನ್ಗಳನ್ನು ಕಲೆ ಹಾಕಿತು. ಇದಕ್ಕುತ್ತರವಾಗಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 156ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಕಿವೀಸ್ 103ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿ 255 ರನ್ ಕಲೆಹಾಕಿತು. ಭಾರತಕ್ಕೆ 359 ರನ್ಗಳ ಗುರಿಯನ್ನು ನೀಡಿತು.
ಮತ್ತೆ ನಿರಾಸೆ ಮೂಡಿಸಿದ ಟೀಂ ಇಂಡಿಯಾ ಆಟಗಾರರು; ಈ ಗುರಿಯೊಂದಿಗೆ ಕಣಕ್ಕಿಳಿದ ಭಾರತೀಯ ಆಟಗಾರರು, ಮತ್ತೊಮ್ಮೆ ನಿರಾಸೆ ಮೂಡಿಸಿದರು. ಜೈಸ್ವಾಲ್ (77) ಮತ್ತು ರವೀಂದ್ರ ಜಡೇಜಾ (42) ಹೊರತುಪಡಿಸಿ ಉಳಿದ ಬ್ಯಾಟರ್ಗಳು ಕಿವೀಸ್ ಬೌಲಿಂಗ್ ಎದುರಿಸುವಲ್ಲಿ ವಿಫಲರಾದರು. ಆರಂಭಿಕವಾಗಿ ಬ್ಯಾಟಿಂಗ್ಗೆ ಬಂದ ರೋಹಿತ್ ಶರ್ಮಾ (8), ವಿರಾಟ್ ಕೊಹ್ಲಿ (17) ಎರಡನೇ ಇನ್ನಿಂಗ್ಸ್ನಲ್ಲೂ ವಿಫಲರಾದರು. ಉಳಿದಂತೆ ಶುಭಮನ್ ಗಿಲ್ (23), ಸರ್ಫರಾಜ್ ಖಾನ್ (9), ವಾಷಿಂಗ್ಟನ್ ಸುಂದರ್ (21), ಅಶ್ವಿನ್ 18 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಸ್ಯಾಂಟ್ನರ್ 6 ವಿಕೆಟ್ ಪಡೆದರೆ, ಅಜಾಜ್ ಪಟೇಲ್ 2, ಗ್ಲೆನ್ ಫಿಲಿಫ್ಸ್ 1 ವಿಕೆಟ್ ಪಡೆದು ಮಿಂಚಿದರು.
ಸ್ಯಾಂಟ್ನರ್ ಪ್ರದರ್ಶನ: ಭಾರತ ವಿರುದ್ಧ 2ನೇ ಟೆಸ್ಟ್ನಲ್ಲಿ ಕಿವೀಸ್ ಪರ ಸ್ಯಾಂಟ್ನರ್ ಅತಿ ಹೆಚ್ಚು ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ನಲ್ಲಿ 7 ವಿಕೆಟ್ ಪಡೆದ ಅವರು 2ನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಉರುಳಿಸಿದರು. ಇದರೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಇದನ್ನೂ ಓದಿ:ಕೇವಲ 10 ಎಸೆತಗಳಲ್ಲಿ ಮುಗಿದ 5 ದಿನದ ಟೆಸ್ಟ್ ಮ್ಯಾಚ್: ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಅವಧಿಯ ಪಂದ್ಯವಿದು!