WTC Points Table India:ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 113 ರನ್ಗಳ ಹೀನಾಯ ಸೋಲನುಭವಿಸಿದೆ. ಇದರೊಂದಿಗೆ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಕೈಚೆಲ್ಲಿದೆ. ತವರು ನೆಲದಲ್ಲಿ ಸತತ 18 ಟೆಸ್ಟ್ ಸರಣಿ ಗೆದ್ದು ಗೆಲವಿನ ಓಟ ಮುಂದುವರೆಸಿದ್ದ ಭಾರತದ ಓಟಕ್ಕೆ ಕಿವೀಸ್ ಪಡೆ ಬ್ರೇಕ್ ಹಾಕಿದೆ.
ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ನಲ್ಲಿ 156 ರನ್ಗಳಿಗೆ ಸೋಲನ್ನು ಕಂಡಿದ್ದ ಭಾರತ ಎರಡನೇ ಪಂದ್ಯದಲ್ಲಿ 113 ರನ್ಗಳಿಂದ ಸೋಲನುಭವಿಸಿತು. ತವರಿನಲ್ಲಿ ಸ್ಪಿನ್ ಬಲೆ ಬೀಸಿ ಎದುರಾಳಿಗಳನ್ನು ಕಾಡುತ್ತಿದ್ದ ಭಾರತ ಈ ಬಾರಿ ಅದೇ ಅಸ್ತ್ರಕ್ಕೆ ತಲೆಬಾಗಿ ನ್ಯೂಜಿಲೆಂಡ್ಗೆ ಸರಣಿ ಬಿಟ್ಟುಕೊಟ್ಟಿತು. ಎರಡು ಪಂದ್ಯಗಳ ಸೋಲಿನಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್ಸ್ ಅಂಕಪಟ್ಟಿಯಲ್ಲೂ ಭಾರತ ಭಾರೀ ಹಿನ್ನಡೆ ಅನುಭವಿಸಿದೆ.
WTC ಅಂಕಪಟ್ಟಿ: ನ್ಯೂಜಿಲೆಂಡ್ ವಿರುದ್ಧ ಸತತ ಎರಡು ಸೋಲಿನ ನಂತರವೂ ಭಾರತ ತಂಡ ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಶೇಕಡಾವಾರು ಅಂಕದಲ್ಲಿ ಭಾರೀ ಕುಸಿತ ಕಂಡಿದೆ. ಬಾಂಗ್ಲಾದೇಶ ವಿರುದ್ಧ ಸರಣಿ ಗೆದ್ದ ವೇಳೆ ಭಾರತ WTC ಟೆಸ್ಟ್ ಶೇಕಡಾವಾರು ಅಂಕ 74 ಇತ್ತು. ಇದೀಗ 62.820ಕ್ಕೆ ಬಂದು ತಲುಪಿದೆ. ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್ಸ್ ಋತುವಿನಲ್ಲಿ ಭಾರತ ತಂಡ ಇದುವರೆಗೆ 13 ಪಂದ್ಯಗಳನ್ನು ಆಡಿ 8ರಲ್ಲಿ ಗೆದ್ದು 4ರಲ್ಲಿ ಸೋತಿದೆ. 1 ಪಂದ್ಯ ಡ್ರಾ ಆಗಿದ್ದು 98 ಅಂಕ ಹೊಂದಿದೆ.