18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL)ಗೆ ದಿನಗಣ ಆರಂಭವಾಗಿದ್ದು ಮಾರ್ಚ್ 23ರಿಂದ ಚುಟುಕು ಕ್ರಿಕೆಟ್ ಹಬ್ಬ ಪ್ರಾರಂಭವಾಗಲಿದೆ. ಆದರೆ ಐಪಿಎಲ್ ಆರಂಭಕ್ಕೂ ಮುನ್ನವೇ ಆರ್ಸಿಬಿಗೆ ಟೆನ್ಶನ್ ಶುರುವಾಗಿದೆ.
ಕಳೆದ 17 ಆವೃತ್ತಿಗಳಲ್ಲಿ ಐಪಿಎಲ್ ಕಪ್ ಎತ್ತಿ ಹಿಡಿಯುವಲ್ಲಿ ವಿಫಲವಾಗಿರುವ ಆರ್ಸಿಬಿ ಈ ಬಾರಿ ಹೇಗಾದರೂ ಮಾಡಿ ಕಪ್ ಜಯಿಸಬೇಕೆಂದು ಪಣ ತೊಟ್ಟಿದೆ. ಇದಕ್ಕಾಗಿ ಜೆಡ್ಡಾದಲ್ಲಿ ಇತ್ತೀಚೆಗೆ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿ ಮಾಡಿ ಬಲಿಷ್ಠ ತಂಡವನ್ನು ಕಟ್ಟಿದೆ. 8 ವಿದೇಶಿ ಆಟಗಾರರು ಸೇರಿ ಒಟ್ಟು 22 ಪ್ಲೇಯರ್ಸ್ ಆರ್ಸಿಬಿ ತಂಡದಲ್ಲಿದ್ದಾರೆ. ಆದರೆ ಹರಾಜಿನಲ್ಲಿ ಆರ್ಸಿಬಿ ಖರೀದಿಸಿದವರ ಪೈಕಿ ಮೂವರು ಸ್ಟಾರ್ ಆಟಗಾರರು ಇತ್ತೀಚಿನ ಟಿ20 ಪಂದ್ಯಗಳಲ್ಲಿ ಫ್ಲಾಪ್ ಆಗಿದ್ದು, ಆರ್ಸಿಬಿಗರ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.
ಹೌದು, ಆರ್ಸಿಬಿಯ ಸ್ಟಾರ್ ಆಟಗಾರರಾದ ಫಿಲ್ ಸಾಲ್ಟ್, ಜಾಕೋಬ್ ಬೆಥೆಲ್, ಲಿಯಾಮ್ ಲಿವಿಂಗ್ಸ್ಟನ್ ಇತ್ತೀಚಿನ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ. ಇಂಗ್ಲೆಂಡ್ನ ಯುವ ಬ್ಯಾಟರ್ ಜಾಕೊಬ್ ಬೆಥೆಲ್ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಖ್ಯಾತಿ ಪಡೆದಿದ್ದಾರೆ. ಆದರೆ ಕಳೆದ 10 ಟಿ20 ಇನ್ನಿಂಗ್ಸ್ಗಳಲ್ಲಿ ಅವರ ಬ್ಯಾಟಿಂಗ್ನಿಂದ ಕೇವಲ ಒಂದೇ ಒಂದು ಅರ್ಧಶತಕ ಮಾತ್ರ ಬಂದಿದೆ.
ಭಾರತ ವಿರುದ್ಧದ ಟಿ20 ಸರಣಿಗೂ ಮೊದಲು ಬಿಗ್ ಬ್ಯಾಶ್ ಲೀಗ್ನಲ್ಲಿ ಮೇಲ್ಬೋರ್ನ್ ರೆನಿಗೆಡ್ಸ್ ತಂಡದ ಪರ ಬೆಥೆಲ್ 9 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟ್ನಿಂದ ಕೇವಲ ಒಂದು ಅರ್ಧಶತಕ ಮಾತ್ರ ದಾಖಲಾಗಿದೆ. ಹುರಿಕೇನ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 89 ರನ್ ಕಲೆಹಾಕಿದ್ದರು. ಇದು ಬಿಟ್ಟಿರೆ ಪರ್ತ್ ಸ್ಕಾಚರ್ಸ್ ವಿರುದ್ಧ 49ರನ್ ಬಾರಿಸಿದ್ದರು. ಉಳಿದ 7 ಪಂದ್ಯಗಳಲ್ಲಿ 7, 1, 2, 21, 2, 30, 3 ರನ್ ಮಾತ್ರ ಕಲೆ ಹಾಕಿದ್ದಾರೆ.