ಚೆನ್ನೈ(ತಮಿಳುನಾಡು): ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಕ್ರಿಕೆಟ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದಿನಿಂದ ತಮಿಳುನಾಡಿನ ಚೆನ್ನೈನಲ್ಲಿ ಶುರುವಾಗುತ್ತಿದೆ. ಭಾರತ ಕಳೆದ 6 ತಿಂಗಳ ಬಳಿಕ ಟೆಸ್ಟ್ ಪಂದ್ಯ ಆಡುತ್ತಿದೆ. ಐತಿಹಾಸಿಕ ಟಿ20 ವಿಶ್ವಕಪ್ ಗೆಲುವಿನ ನಂತರ ಹಿರಿಯ ಆಟಗಾರರು ವಿರಾಮದಲ್ಲಿದ್ದರು. ಆದರೆ ಇನ್ನು ಮುಂದೆ ಭಾರತ ಚಾಂಪಿಯನ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೆಲ್ಲುವುದರೆಡೆಗೆ ತನ್ನ ಚಿತ್ತ ಹರಿಸಿದೆ. ಹಾಗಾಗಿ ಸಹಜವಾಗಿಯೇ ಸದ್ಯಕ್ಕೆ ಟಿ20 ಮಾದರಿಯ ಕ್ರಿಕೆಟ್ ಹಿಂದೆ ಸರಿದಿದೆ.
ಬಾಂಗ್ಲಾದೇಶ ಇತ್ತೀಚಿಗೆ ಪಾಕಿಸ್ತಾನವನ್ನು 2-0 ಅಂತರದಿಂದ ಮಣಿಸಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದಿದೆ. ಇದೇ ಹುಮ್ಮಸ್ಸು ಮತ್ತು ಆತ್ಮವಿಶ್ವಾಸದೊಂದಿಗೆ ಭಾರತಕ್ಕೆ ಆಗಮಿಸಿದೆ. ಪ್ರವಾಸಿ ತಂಡ ಇದೇ ಪ್ರದರ್ಶನವನ್ನು ಮುಂದುವರೆಸುವ ತುಡಿತದಲ್ಲಿದೆ. ಆದರೆ ಬಲಿಷ್ಠ ಭಾರತವನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಆ ತಂಡಕ್ಕೂ ಅರಿವಿದೆ.
ಬಾಂಗ್ಲಾದೇಶ ಉತ್ತಮ ಟೆಸ್ಟ್ ಲೈನಪ್ ಹೊಂದಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬ್ಯಾಟಿಂಗ್, ಬೌಲಿಂಗ್ ಹಾಗು ಆಲ್‌ರೌಂಡರ್ ವಿಭಾಗಗಳಲ್ಲಿ ಸಾಕಷ್ಟು ಸುಧಾರಿಸಿದೆ. ಆದರೆ, 2 ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಿದ ಭಾರತವನ್ನು ಎದುರಿಸಿ ಗೆಲ್ಲಲು ಬಾಂಗ್ಲಾ ಅತ್ಯುತ್ತಮ ಪ್ರದರ್ಶನ ತೋರಬೇಕು.
ಕೊಹ್ಲಿ, ಪಂತ್ ಮೇಲೆ ನಿರೀಕ್ಷೆ: ಭಾರತ ಟೆಸ್ಟ್ ತಂಡಕ್ಕೆ ಎರಡು ವರ್ಷಗಳ ನಂತರ ರಿಷಬ್ ಪಂತ್ ಕಮ್‌ಬ್ಯಾಕ್ ಮಾಡಿದ್ದಾರೆ. ಟೆಸ್ಟ್‌ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಅವರಿಗಿದು ಉತ್ತಮ ಅವಕಾಶ. ಅದೇ ರೀತಿ, ರನ್ ಮಷಿನ್ ವಿರಾಟ್ ಕೊಹ್ಲಿ 8 ತಿಂಗಳ ಬಳಿಕ ಟೆಸ್ಟ್ ಕ್ರಿಕೆಟ್ ಆಡಲು ಮೈದಾನಕ್ಕಿಳಿಯುತ್ತಿರುವುದು ಗಮನಾರ್ಹ. ಇದರ ಜೊತೆಗೆ, ಟೀಂ ಇಂಡಿಯಾ ನೂತನ ಕೋಚ್ ಹುದ್ದೆ ಅಲಂಕರಿಸಿದ ಬಳಿಕ ಗೌತಮ್ ಗಂಭೀರ್ ಅವರಿಗೂ ಮೊದಲ ಟೆಸ್ಟ್ ಪಂದ್ಯ. ಈ ಎಲ್ಲಾ ಕಾರಣಗಳಿಂದ ಈ ಸರಣಿಯ ಮೇಲೆ ಅಭಿಮಾನಿಗಳಿಗೂ ಸಾಕಷ್ಟು ನಿರೀಕ್ಷೆಗಳಿವೆ. ಈ ಟೆಸ್ಟ್ ಸರಣಿ ಭಾರತಕ್ಕೆ ಮುಂದೆ ನ್ಯೂಜಿಲೆಂಡ್ ಸರಣಿ ಹಾಗು ಸುದೀರ್ಘ ಅವಧಿಯ ಅತ್ಯಂತ ಮಹತ್ವದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಒಂದು ರೀತಿಯಲ್ಲಿ ರಿಹಾರ್ಸಲ್ ಎನ್ನಬಹುದು.