Ind vs Aus: ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯ ಅಂತಿಮ ಘಟ್ಟಕ್ಕೆ ತಲುಪಿದೆ. ನಾಳೆ ಪಂದ್ಯದ ಫಲಿತಾಂಶ ಹೊರ ಬೀಳಲಿದೆ.
ರಣರೋಚಕತೆಯಿಂದ ಕೂಡಿರುವ ಈ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿ ಅಲ್ಪಮೊತ್ತದ ಹಿನ್ನಡೆ ಸಾಧಿಸಿತ್ತು. ಅಲ್ಲದೇ, ಪಂದ್ಯದ ನಾಲ್ಕನೇ ದಿನವಾದ ಇಂದು ಹೇಗಾದ್ರು ಮಾಡಿ ಕಾಂಗರೂ ಪಡೆಯ ಎಲ್ಲ ವಿಕೆಟ್ಗಳನ್ನು ಉರುಳಿಸಿ ಅಲ್ಪಮೊತ್ತಕ್ಕೆ ನಿರ್ಬಂಧಿಸಬೇಕು. ಜತೆಗೆ 5ನೇ ದಿನದಂದು ಸಂಪೂರ್ಣವಾಗಿ ಬ್ಯಾಟ್ ಮಾಡಿ ಆಸೀಸ್ ನೀಡಿದ್ದ ಗುರಿಯನ್ನ ತಲುಪಬೇಕು ಎಂದು ಭಾರತ ಯೋಜನೆ ರೂಪಿಸಿತ್ತು. ಆದರೆ ಭಾರತದ ಪ್ಲಾನ್ ವಿಫಲವಾಗಿದೆ.
ನಾಲ್ಕನೇ ದಿನವಾದ ಇಂದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಕೇವಲ 173ರನ್ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು. ಆದರೆ ನಾಥನ್ ಲಿಯಾನ್ ಮತ್ತು ಸ್ಕಾಟ್ ಬೋಲ್ಯಾಂಡ್ 10ನೇ ವಿಕೆಟ್‌ಗೆ ಜೊತೆಯಾಗಿ ಅಜೇಯವಾಗಿ 55 ರನ್‌ಗಳ ಜೊತೆಯಾಟವಾಡಿ 5ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಆಸ್ಟ್ರೇಲಿಯಾದ ಕೊನೆಯ ವಿಕೆಟ್ ಪಡೆಯಲು ಟೀಂ ಇಂಡಿಯಾ ಬೌಲರ್‌ಗಳು ಪರದಾಡಿದರು. ಅದರಲ್ಲೂ ಜಸ್ಪ್ರೀತ್ ಬುಮ್ರಾ ಎಸೆದ ನಾಲ್ಕನೇ ದಿನದ ಕೊನೆಯ ಓವರ್‌ನಲ್ಲಿ ನಾಥನ್ ಲಿಯಾನ್ ಸ್ಲಿಪ್‌ನಲ್ಲಿದ್ದ ಕೆಎಲ್ ರಾಹುಲ್‌ಗೆ ಕ್ಯಾಚ್ ನೀಡಿದರು. ಇದನ್ನು ಕಾಲಿನ ಸಹಾಯದಿಂದ ಕ್ಯಾಚ್ ಪಡೆದಿದ್ದರು. ಕೊನೆಗೂ ವಿಕೆಟ್ ಸಿಕ್ಕಿತು ಎಂದು ಟೀಂ ಇಂಡಿಯಾ ಆಟಗಾರರು ನಿಟ್ಟುಸಿರು ಬಿಟ್ಟು ಸಂಭ್ರಮಿಸಿದ್ದರು. ಆದರೆ ಅಂಪೈರ್ ಇದನ್ನೂ ನೋಬಾಲ್ ಎಂದು ತೀರ್ಪು ನೀಡಿದರು.