Jaiswal vs Sam Constas Viral Video: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಐದನೇ ದಿನದಂದು ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರು ಸ್ಲೆಡ್ಜಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ 19 ವರ್ಷದ ಸ್ಯಾಮ್ ಕಾನ್ಸ್ಟಾಸ್ಗೆ ತಕ್ಕ ಉತ್ತರ ನೀಡಿದ್ದಾರೆ.
ಸಿಲ್ಲಿ ಪಾಯಿಂಟ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕಾನ್ಸ್ಟಾಸ್ ಬ್ಯಾಟಿಂಗ್ ಮಾಡುತ್ತಿದ್ದ ಜೈಸ್ವಾಲ್ ಅವರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದ್ದಾನೆ. ಅಲ್ಲದೇ ಪ್ರತಿ ಬೌಲಿಂಗ್ ವೇಳೆ ಕೂಗಾಡುತ್ತ ಜೈಸ್ವಾಲ್ ಅವರ ಏಕಾಗ್ರತೆಗೆ ಭಂಗ ತರಲು ಯತ್ನಿಸಿದ್ದಾನೆ. ಇದರಿಂದ ಕುಪಿತಗೊಂಡ ಜೈಸ್ವಾಲ್ " ಮೊದಲು ನಿನ್ನ ಕೆಲಸವನ್ನು ನೆಟ್ಟಗೆ ಮಾಡು" ಎಂದು ಮಾತಿನಿಂದ ಚಾಟಿ ಬೀಸಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಜೈಸ್ವಾಲ್ ಮುಂದಿನ ಎಸೆತದಲ್ಲಿ, ಸ್ಯಾಮ್ ಕಾನ್ಸ್ಟಾಸ್ ಕಡೆ ಬಲವಾಗಿ ಹೊಡೆದಿದ್ದಾರೆ. ಚೆಂಡು ನೇರವಾಗಿ ಹೋಗಿ ಕಾನ್ಸ್ಟಾಸ್ ದೇಹಕ್ಕೆ ಬಲವಾಗಿ ತಾಗಿದೆ. ಚೆಂಡು ಬಿದ್ದ ರಭಸಕ್ಕೆ ನೋವುಂಟಾದರೂ, ಅದನ್ನು ತೋರಿಸಿಕೊಂಡರೆ ಎಲ್ಲಿ ಮರ್ಯಾದೆ ಹೋಗುತ್ತೆ ಎಂದು ತುಟಿ ಪಿಟಕ್ ಅನ್ನದೆ ಕಾನ್ಸ್ಟಾಸ್ ಫೀಲ್ಡಿಂಗ್ ಮುಂದುವರೆಸಿದ್ದಾರೆ. ಜೈಸ್ವಾಲ್ ಕೊಟ್ಟ ಉತ್ತರಕ್ಕೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ.