ದುಬೈ:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮುಹೂರ್ತ ಫಿಕ್ಸ್ ಮಾಡಿದೆ. ಕ್ರಿಕೆಟ್ ಕಾಶಿ ಎಂದೇ ಕರೆಯಲಾಗುವ ಲಾರ್ಡ್ಸ್ ಮೈದಾನದಲ್ಲಿ ಅಗ್ರ ಎರಡು ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಈ ಮಧ್ಯೆ, ಡಬ್ಲ್ಯೂಟಿಸಿ ಫೈನಲ್ಗಾಗಿ ಸೆಣಸಾಡುತ್ತಿರುವ ತಂಡಗಳ ನೂತನ ಶ್ರೇಯಾಂಕ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ.
ಸದ್ಯ ಭಾರತ ಮತ್ತು ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಅಗ್ರ 2 ಸ್ಥಾನದಲ್ಲಿವೆ. ಭಾರತ ಆಡಿರುವ 9 ಪಂದ್ಯಗಳಲ್ಲಿ 6 ಗೆದ್ದು 2 ಸೋತು, 1 ಡ್ರಾ ಸಾಧಿಸಿದೆ. ಶೇಕಡಾ 68.52 ರಷ್ಟು ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ 12 ಪಂದ್ಯಗಳಲ್ಲಿ 8 ಗೆಲುವು, 3 ಸೋಲು, 1 ಡ್ರಾದೊಂದಿಗೆ ಶೇಕಡಾ 62.5 ಫಲಿತಾಂಶದೊಂದಿಗೆ 2ನೇ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್ ಆಗಿರುವ ನ್ಯೂಜಿಲ್ಯಾಂಡ್ 6 ಪಂದ್ಯಗಳಲ್ಲಿ ತಲಾ 3 ಗೆಲುವು, ಸೋಲಿನಿಂದಿಗೆ ಶೇಕಡಾ 50 ಅಂಕ ಹೊಂದಿ ಮೂರನೇ ಕ್ರಮಾಂಕದಲ್ಲಿದೆ.
ಪಾಕ್ ಸೋಲಿಸಿದ ಬಾಂಗ್ಲಾಗೆ ಬಂಪರ್:ಪಾಕಿಸ್ತಾನ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿದ ಬಾಂಗ್ಲಾದೇಶ ಪಾಯಿಂಟ್ ಪಟ್ಟಿಯಲ್ಲಿ ಭರ್ಜರಿ ಸಾಧನೆ ಮಾಡಿದೆ. ಆಡಿದ 6 ಪಂದ್ಯಗಳಲ್ಲಿ ತಲಾ 3 ಸೋಲು, ಗೆಲುವಿನೊಂದಿಗೆ 45.83 ರಷ್ಟು ಗೆಲುವಿನ ಪ್ರತಿಶತ ಕಾಯ್ದುಕೊಂಡು 4ನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಇರುವ ಟೀಂಗಳಲ್ಲಿ ಅತಿಹೆಚ್ಚು ಪಂದ್ಯವಾಡಿದ್ದರೂ ಗೆಲುವಿನ ಪ್ರಮಾಣ ಮಾತ್ರ ಶೇಕಡಾ 45 ರಷ್ಟಿದೆ. ಆಂಗ್ಲರು 15 ಪಂದ್ಯಗಳಲ್ಲಿ 8 ಗೆಲುವು, 6 ಸೋಲು, 1 ಡ್ರಾ ಸಾಧಿಸಿ 5ನೇ ಶ್ರೇಯಾಂಕ ಪಡೆದಿದ್ದಾರೆ.