ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಆತಿಥೇಯ ನ್ಯೂಜಿಲೆಂಡ್ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಅಂಕ ಪಟ್ಟಿಯಲ್ಲಿ ಕುಸಿತ ಕಂಡಿದ್ದು, ಭಾರತ ಅಗ್ರಸ್ಥಾನಕ್ಕೇರಿದೆ. ಕಿವೀಸ್ ಎರಡನೇ ಸ್ಥಾನಕ್ಕೆ ಇಳಿದಿದೆ. ಕಳೆದೆರಡು ಬಾರಿಯ ಫೈನಲಿಸ್ಟ್ ಆಗಿರುವ ಟೀಂ ಇಂಡಿಯಾ, ಈ ಸಲವೂ ಅಂತಿಮ ಹಂತ ತಲುಪುವ ನೆಚ್ಚಿನ ತಂಡಗಳಲ್ಲೊಂದಾಗಿದೆ.
ವೆಲ್ಲಿಂಗ್ಟನ್ ಟೆಸ್ಟ್ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ನಾಲ್ಕು ಪಂದ್ಯಗಳಲ್ಲಿ 36 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು, ಮತ್ತು ಶೇಕಡಾ 75ರಷ್ಟು ಪಾಯಿಂಟ್ಸ್ ಗಳಿಸಿತ್ತು. ಆದರೆ, ವೆಲ್ಲಿಂಗ್ಟನ್ ಹಣಾಹಣಿಯಲ್ಲಿ 172 ರನ್‌ಗಳ ಭಾರಿ ಮುಖಭಂಗ ಅನುಭವಿಸಿ, 2021ರ WTC ಚಾಂಪಿಯನ್ ತಂಡವು ಅಗ್ರಸ್ಥಾನ ಕಳೆದುಕೊಂಡಿದೆ. ಶೇಕಡಾ 60ರ ಅಂಕಗಳೊಂದಿಗೆ ನಂ.2 ಸ್ಥಾನಕ್ಕೆ ಜಾರಿದೆ. ಈ ಹಿಂದೆ 8 ಪಂದ್ಯಗಳಲ್ಲಿ 62 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದ ಭಾರತ, 64.58 ಪಾಯಿಂಟ್ ಗಳಿಸಿ ಮೊದಲ ಸ್ಥಾನಕ್ಕೇರಿದೆ.
ವೆಲ್ಲಿಂಗ್ಟನ್‌ನಲ್ಲಿನ ಗೆಲುವಿನೊಂದಿಗೆ 12 ನಿರ್ಣಾಯಕ ಅಂಕಗಳನ್ನು ಪಡೆದ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಅಂಕಗಳಲ್ಲಿ 66ರಿಂದ 78ಕ್ಕೆ ಏರಿಕೆ ಕಂಡುಬಂದಿದ್ದು, ಶೇಕಡಾವಾರು ಕೂಡ 55ರಿಂದ ಈಗ 59.09ಕ್ಕೆ ತಲುಪಿದೆ. ಕಿವೀಸ್ ವಿರುದ್ಧದ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಗೆದ್ದರೆ, ಹಾಲಿ ಚಾಂಪಿಯನ್ನರು ನ್ಯೂಜಿಲೆಂಡ್ ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೇರುವ ಅವಕಾಶ ಹೊಂದಿದ್ದಾರೆ.
ಉಭಯ ತಂಡಗಳು ಕ್ರೈಸ್ಟ್‌ಚರ್ಚ್‌ನಲ್ಲಿ ಮಾರ್ಚ್ 8ರಂದು ಆರಂಭವಾಗಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇನ್ನೊಂದೆಡೆ, ಮಾರ್ಚ್ 7ರಿಂದ ಧರ್ಮಶಾಲಾದಲ್ಲಿ ಆರಂಭವಾಗಲಿರುವ 5ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವು ಭಾರತವನ್ನು ಸೋಲಿಸಿದರೆ, ಆಸ್ಟ್ರೇಲಿಯಾ ಕೂಡ ಅಗ್ರಸ್ಥಾನಕ್ಕೆ ಏರಲು ಅವಕಾಶವಿದೆ.