ನವದೆಹಲಿ:ಈ ವರ್ಷ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಭಾರತ ಮಹಿಳಾ ಮತ್ತು ಪುರುಷ ಅರ್ಚರಿ ತಂಡಗಳು ಅರ್ಹತೆ ಗಿಟ್ಟಿಸಿಕೊಂಡಿವೆ. ಅರ್ಚರಿ ವಿಶ್ವಕಪ್ನಲ್ಲಿ ಪದಕಗಳ ಕೊಳ್ಳೆ ಹೊಡೆದು ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ತನ್ನ ಸ್ಥಾನವನ್ನು ಭದ್ರಮಾಡಿಕೊಂಡವು.
ಸೋಮವಾರ ಬಿಡುಗಡೆಯಾದ ವಿಶ್ವ ಆರ್ಚರಿ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಪಡೆದಿದೆ. ಇದು ತಂಡಕ್ಕೆ ವರದಾನವಾಗಿದ್ದು, ಪ್ಯಾರಿಸ್ ಒಲಿಂಪಿಕ್ಗೆ ಟಿಕೆಟ್ ಪಡೆದುಕೊಂಡಿತು. ಜೊತೆಗೆ ಭಾರತೀಯ ತಂಡಗಳು ಕ್ರೀಡಾಕೂಟದಲ್ಲಿ ಪುರುಷ, ಮಹಿಳೆಯರ ವೈಯಕ್ತಿಕ ಮತ್ತು ಮಿಶ್ರ ವಿಭಾಗಗಳ ಎಲ್ಲಾ ಐದು ಸ್ಪರ್ಧೆಗಳಲ್ಲಿ ಭಾಗವಹಿಸಲಿವೆ. ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಭಾರತ ಮತ್ತು ಚೀನಾ ಅರ್ಹತೆ ಪಡೆದರೆ, ಮಹಿಳಾ ವಿಭಾಗದಲ್ಲಿ ಇಂಡೋನೇಷ್ಯಾ ತಂಡ ಒಲಿಂಪಿಕ್ ಕೋಟಾದಲ್ಲಿ ಸ್ಥಾನ ಪಡೆದುಕೊಂಡ ಎರಡನೇ ದೇಶವಾಗಿದೆ.
ಮೂರು ಹಂತದಲ್ಲಿ ಅರ್ಹತಾ ಪಂದ್ಯ:ಒಲಿಂಪಿಕ್ ಕ್ರೀಡಾಕೂಟದಲ್ಲಿ ಪ್ರತಿ ಗುಂಪಿನಲ್ಲಿ 12 ತಂಡಗಳು ಹೊಂದಿರುತ್ತವೆ. ಐದು ತಂಡಗಳು ಮಿಶ್ರ ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತವೆ. ಇದೇ ಮೊದಲ ಬಾರಿಗೆ ಅರ್ಹತಾ ಪಂದ್ಯಗಳಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಒಲಿಂಪಿಕ್ ಕೋಟಾದಲ್ಲಿ ಸ್ಥಾನ ಪಡೆದಿವೆ. ಇದಕ್ಕಾಗಿ ಮೂರು ಹಂತದಲ್ಲಿ ಅರ್ಹತಾ ಪಂದ್ಯಗಳನ್ನು ನಡೆಸಲಾಗಿದೆ.
ಕಳೆದ ವರ್ಷ ಬರ್ಲಿನ್‌ನಲ್ಲಿ ನಡೆದ ವಿಶ್ವ ಅರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಒಲಂಪಿಕ್ ಕ್ವಾಲಿಫೈಯರ್ ಅನ್ನು ನಡೆಸಲಾಗಿದ್ದು, ಅದರಲ್ಲಿ ದಕ್ಷಿಣ ಕೊರಿಯಾ, ಟರ್ಕಿ ಮತ್ತು ಜಪಾನ್ ಪುರುಷರ ತಂಡಗಳು ಅರ್ಹತೆ ಗಳಿಸಿದ್ದವು. ಮಹಿಳಾ ವಿಭಾಗದಲ್ಲಿ ಜರ್ಮನಿ ಮತ್ತು ಮೆಕ್ಸಿಕೋ ಸ್ಥಾನ ಗಿಟ್ಟಿಸಿಕೊಂಡಿದ್ದವು.