ಹೈದರಾಬಾದ್: ಉದಯೋನ್ಮುಖ ಆಟಗಾರರ ಟಿ20 ಏಷ್ಯಾಕಪ್ ಪಂದ್ಯವಾಳಿಯಲ್ಲಿ ಭಾರತ ಎ ತಂಡದ ಪಯಣ ಮುಕ್ತಾಯಗೊಂಡಿದೆ. ಶುಕ್ರವಾರ ಅಲ್ ಅಮೆರತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾ 20 ರನ್ಗಳಿಂದ ಸೋಲನುಭವಿಸಿದೆ. 207 ರನ್ಗಳ ಬೃಹತ್ ಗುರಿಯೊಂದಿಗೆ ಕಣಕ್ಕಿಳಿದ ಭಾರತ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್ಗಳಿಸಲಷ್ಟೇ ಶಕ್ತವಾಯಿತು.
ಭಾರತದ ಪರ ರಮಣ್ದೀಪ್ ಸಿಂಗ್ (64) ಕೊನೆಯ ವರೆಗೆ ಹೊರಾಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ರಮಣ್ದೀಪ್ ಮತ್ತು ಬಡೋನಿ (31) ಹೊರತು ಪಡಿಸಿದರೆ ಉಳಿದ ಯಾವೊಬ್ಬ ಬ್ಯಾಟರ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅಫ್ಘಾನ್ ಪರ ಗಜನ್‌ಫರ್ ಮತ್ತು ರೆಹಮಾನ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಅಫ್ಘಾನ್ ಇನ್ನಿಂಗ್ಸ್: ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ್ದ ಅಫ್ಘಾನ್ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 206 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಆರಂಭಿಕ ಬ್ಯಾಟರ್ಗಳಾದ ಜುಬೈದ್ ಅಕ್ಬರಿಕ್ ಮತ್ತು ಸೇದಿಖುಲ್ಲಾ ಅಟಲ್ ಉತ್ತಮ ರನ್ ಕಲೆಹಾಕಿದರು. ಸೆದಿಖುಲ್ಲಾ 52 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 83 ರನ್ ಗಳಿಸಿದರೇ, ಜುಬೈದ್ 41 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 64 ರನ್ ಕಲೆಹಾಕಿದರು. ಈ ಇಬ್ಬರ ಬ್ಯಾಟಿಂಗ್ ಸಹಾಯದಿಂದ ಅಫ್ಘಾನ್ ಬೃಹತ್ ಮೊತ್ತ ಕಲೆಹಾಕಿತು.
ಭಾರತದ ಪರ ರಾಸಿಖ್ ದಾರ್ ಸಲಾಂ 3 ವಿಕೆಟ್ ಪಡೆದರೆ, ಅಕಿಬ್ ಖಾನ್ ಒಂದು ವಿಕೆಟ್ ಪಡೆದರು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಶ್ರೀಲಂಕಾ ಮತ್ತು ಅಫ್ಘಾನ್ ತಂಡಗಳು ಮುಖಾಮುಖಿಯಾಗಲಿವೆ.
ಇದನ್ನೂ ಓದಿ:ಕೇವಲ 1ರನ್ ಅಂತರದಲ್ಲಿ 8 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ 53ಕ್ಕೆ ಆಲೌಟ್!