ಮೊಕಿ(ಚೀನಾ): ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತ ಚೀನಾವನ್ನು 1-0 ಗೋಲಿನಿಂದ ಮಣಿಸಿದೆ. ಈ ಮೂಲಕ ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ಹಾಕಿ ತಂಡ ದಾಖಲೆಯ 5ನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಜೊತೆಗೆ ಭಾರತ ಫೈನಲ್ ಸೇರಿದಂತೆ ಸತತ 7 ಪಂದ್ಯಗಳನ್ನು ಗೆದ್ದು ಪ್ರಶಸ್ತಿಯನ್ನು ವಶಪಡಿಸಿಕೊಂಡಿರುವುದು ವಿಶೇಷ.
ತೀವ್ರ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡುಬಂತು. ಹೀಗಾಗಿಯೇ ಮೊದಲ ಮೂರು ಕ್ವಾರ್ಟರ್ಗಳಲ್ಲಿ ಯಾವ ತಂಡಕ್ಕೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಆದರೆ, ನಾಲ್ಕನೇ ಕ್ವಾರ್ಟರ್‌ನ 51ನೇ ನಿಮಿಷದಲ್ಲಿ ಡಿಫೆಂಡರ್ ಜುಗ್ರಾಜ್ ಸಿಂಗ್ ಪಂದ್ಯ ಏಕೈಕ ಮತ್ತು ನಿರ್ಣಾಯಕ ಗೋಲು ಬಾರಿಸಿದರು. ಈ ಮೂಲಕ ಭಾರತ 1-0 ಮುನ್ನಡೆ ಸಾಧಿಸಿ ಸತತ ಎರಡನೇ ಬಾರಿ ಏಷ್ಯನ್ ಚಾಂಪಿಯನ್ ಆಗಲು ಕಾರಣರಾದರು.
ತೀವ್ರ ಪೈಪೋಟಿ ನೀಡಿದ ಚೀನಾ:ಪಂದ್ಯದ ಒಂಬತ್ತನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಗೋಲು ಗಳಿಸಲು ಅವಕಾಶ ಸಿಕ್ಕಿತು, ಆದರೆ ಚೀನಾದ ರಕ್ಷಣಾತ್ಮಕ ಆಟದಿಂದ ಅದು ಸಾಧ್ಯವಾಗಲಿಲ್ಲ. 10ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಾಗ ನಾಯಕ ಹರ್ಮನ್‌ಪ್ರೀತ್ ಗೋಲ್ ಗಳಿಸಲು ವಿಫಲರಾದರು. ಹೀಗಾಗಿ ವಿರಾಮದ ವೇಳೆಗೆ ಸ್ಕೋರ್‌ಲೈನ್ 0-0 ಆಗಿತ್ತು. ಮೂರನೇ ಕ್ವಾರ್ಟರ್‌ನಲ್ಲಿ ಭಾರತ ಆಕ್ರಮಣಕಾರಿ ಆಟವಾಡಿತು. ಆದರೆ, ಗೋಲು ಗಳಿಸಲು ಯಶಸ್ವಿಯಾಗಲಿಲ್ಲ. ಅಂತಿಮವಾಗಿ 51ನೇ ನಿಮಿಷದಲ್ಲಿ ಜುಗ್ರಾಜ್ ಸಿಂಗ್ ಗೋಲು ಬಾರಿಸಲು ಯಶಸ್ವಿಯಾದರು. ಟೂರ್ನಿಯ ಮೊದಲ ಪಂದ್ಯದಲ್ಲಿ ಇದೇ ಚೀನಾವನ್ನು 3-0 ಗೋಲುಗಳಿಂದ ಭಾರತ ಸೋಲಿಸಿತ್ತು.