ನವದೆಹಲಿ:ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಇಂದಿನಿಂದ (ಜು. 27 ಶನಿವಾರ) ಆರಂಭವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 7 ಗಂಟೆಗೆ ಪಂದ್ಯ ನಡೆಯಲಿದ್ದು, ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸಜ್ಜುಗೊಂಡಿದೆ. ಇದೇ ಮೊದಲ ಬಾರಿಗೆ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಹಾಗೂ ಮುಖ್ಯ ಕೋಚ್ ಗೌತಮ್ ಗಂಭಿರ್ ಅವರ ನೇತೃತ್ವದಲ್ಲಿ ಭಾರತ ಕ್ರಿಕೆಟ್ ತಂಡದ ಕಣಕ್ಕಿಳಿಯುತ್ತಿದೆ. ಲಂಕಾ ತಂಡದ ನಾಯಕರಾದ ಚರಿತ್ ಅಸಲಂಕಾ ಅವರಿಗೂ ಇದು ಮೊದಲ ಸರಣಿಯಾಗಿದೆ. ಉಭಯ ತಂಡಗಳು ಹಲವು ಹೊಸತನದಿಂದ ಮೈದಾನಕ್ಕೆ ಇಳಿಯುತ್ತಿರುವುದರಿಂದ ಕುತೂಹಲ ಹೆಚ್ಚಿಸಿದೆ.
ಇತ್ತೀಚೆಗೆ ನಡೆದ ಜಿಂಬಾಬ್ವೆ ವಿರುದ್ಧ ಐದು ಟಿ-20 ಪಂದ್ಯಗಳ ಸರಣಿಯಲ್ಲಿ 4-1 ಅಂತರದಲ್ಲಿ ಜಯ ಸಾಧಿಸಿರುವ ಭಾರತ ತಂಡವು, ಹೊಸ ಕೋಚ್ ಅಡಿ ಗೆಲುವಿನ ಅಭಿಯಾನ ಆರಂಭಿಸುವ ಉತ್ಸಾಹದಲ್ಲಿದ್ದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಹಳೆಯ ಅಬ್ಬರ ಕಳೆದುಕೊಂಡಿರುವ ಲಂಕಾ ಹೊಸ ಉತ್ಸಾಹದೊಂದಿಗೆ ಪುಟಿದೇಳುವ ಕಾತರದಲ್ಲಿದೆ. ಪಂದ್ಯ ಗೆಲ್ಲುವ ತವಕದಲ್ಲಿರುವ ಉಭಯ ತಂಡಗಳು, ಕೆಲವು ಬದಲಾವಣೆಗಳೊಂದಿಗೆ ಮೈದಾನಕ್ಕೆ ಇಳಿಯುತ್ತಿವೆ. ಸರಣಿ ಆರಂಭಕ್ಕೂ ಮುನ್ನ ಎರಡೂ ತಂಡಗಳ ಆಟಗಾರರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಹಾಗಾಗಿ ಕೆಲವು ಆಟಗಾರರು ಬದಲಾಗುವ ಸಾಧ್ಯತೆ ಇದೆ.
ಭಾರತ-ಶ್ರೀಲಂಕಾ ಟಿ20 ಮುಖಾಮುಖಿ: ಭಾರತ ಮತ್ತು ಶ್ರೀಲಂಕಾ ನಡುವೆ ಒಟ್ಟು 29 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಭಾರತ ತಂಡ 19 ಪಂದ್ಯಗಳನ್ನು ಗೆದ್ದಿದ್ದರೆ, ಶ್ರೀಲಂಕಾ ತಂಡ ಕೇವಲ 9 ಪಂದ್ಯಗಳನ್ನು ತನ್ನದಾಗಿಸಿಕೊಂಡಿದೆ. ಒಂದು ಪಂದ್ಯದ ಫಲಿತಾಂಶ ಬಂದಿಲ್ಲ. ಕಳೆದ 5 ಪಂದ್ಯಗಳ ಸರಣಿಯಲ್ಲಿ ಭಾರತ 3 ಪಂದ್ಯಗಳನ್ನು ಗೆಲ್ಲುವ ಮೂಲಕ ಪರಾಕ್ರಮ ಮೆರೆದಿದೆ.
ಪಿಚ್ ವರದಿ:ಪಲ್ಲೆಕೆಲೆ ಸ್ಟೇಡಿಯಂನ ಪಿಚ್ ವೇಗದ ಬೌಲರ್‌ಗಳಿಗೆ ಹೆಚ್ಚು ಸಹಕಾರಿ. ಅಷ್ಟೇ ಪ್ರಮಾಣದಲ್ಲಿ ಬ್ಯಾಟ್ಸ್‌ಮನ್‌ಗಳಿಗೂ ಕೂಡ ನೆರವು ನೀಡಬಲ್ಲದು. ವೇಗದ ಬೌಲರ್‌ಗಳು ಹೊಸ ಬಾಲ್ ಬಳಿಸಿದರೆ, ಸ್ಪಿನ್ನರ್ಗಳು ಹಳೆಯ ಬಳಕೆ ಮಾಡುವುದರಿಂದ ಹೆಚ್ಚು ನೆರವಾಗಬಹುದು. ಈ ಮೈದಾನದಲ್ಲಿ ನಡೆದ 23 ಪಂದ್ಯಗಳ ಪೈಕಿ 12 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವು ಗೆದ್ದಿದ್ದರೆ, 9 ಪಂದ್ಯಗಳನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ತಂಡವು ಗುರಿಯನ್ನು ಬೆನ್ನಟ್ಟಿದೆ.
ಹವಾಮಾನ ವರದಿ: ಆಕ್ಯುವೆದರ್ ಪ್ರಕಾರ, ಜುಲೈ 27ರ ಶನಿವಾರದಂದು ಪಲ್ಲೆಕೆಲೆಯಲ್ಲಿ 88 ಪ್ರತಿಶತ ಮಳೆಯಾಗುವ ಸಾಧ್ಯತೆಯಿದೆ. ಪಂದ್ಯದ ಸಮಯದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಸಂಭಾವ್ಯತೆ ಇದೆ ಎಂದು ಆಕ್ಯುವೆದರ್ ತಿಳಿಸಿದೆ.
ಭಾರತೀಯ ಆಟಗಾರರ ಮೇಲೆ ಭರವಸೆ: ಭಾರತದ ಆರಂಭಿಕ ಆಟಗಾರರಾದ ಶುಭಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಮೇಲೆ ಭಾರತ ತಂಡ ಹೆಚ್ಚು ಭರವಸೆ ಇಟ್ಟುಕೊಂಡಿದೆ. ಕ್ರೀಸ್ಗೆ ಕಚ್ಚಿ ನಿಂತರೆ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಬಲ್ಲರು. ಇವರಲ್ಲದೇ, ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಂಡಕ್ಕೆ ಉತ್ತಮ ಫಿನಿಶರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಆರಂಭದಲ್ಲಿ ವಿಕೆಟ್ ಪಡೆಯುವ ನಿರೀಕ್ಷೆಯಿದೆ. ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳನ್ನು ಹೆಚ್ಚು ಕಾಡಬಲ್ಲರು.