ರಾಜ್ಕೋಟ್(ಗುಜರಾತ್) :ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯ ಇಂದಿನಿಂದ ರಾಜ್‌ಕೋಟ್‌ನಲ್ಲಿ ಆರಂಭವಾಗಲಿದೆ. 1-1 ರಲ್ಲಿ ಸಮಬಲವಾಗಿರುವ ಸರಣಿಯಲ್ಲಿ ಉಭಯ ತಂಡಗಳು ಮುನ್ನಡೆ ಸಾಧಿಸಲು ಹೋರಾಟ ನಡೆಸಲಿವೆ. ಈ ಪಂದ್ಯದಲ್ಲಿ ಭಾರತದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಮಹತ್ವದ ಮೈಲಿಗಲ್ಲು ಸ್ಥಾಪಿಸುವ ಸನ್ನಾಹದಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 499 ವಿಕೆಟ್ ಗಳಿಸಿರುವ ಅಶ್ವಿನ್ 1 ವಿಕೆಟ್ ಪಡೆದಲ್ಲಿ 500 ವಿಕೆಟ್ ಪಡೆದ ಬೌಲರ್ಗಳ ಕ್ಲಬ್ಗೆ ಸೇರಲಿದ್ದಾರೆ. ಜೊತೆಗ ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರ ಎಂಬ ದಾಖಲೆಯನ್ನೂ ಅವರು ಬರೆಯಲಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದ 2ನೇ ಟೆಸ್ಟ್ ವೇಳೆ ಅವರು ಈ ಸಾಧನೆಯಿಂದ ವಂಚಿತರಾಗಿದ್ದರು. 236 ಇನಿಂಗ್ಸ್ ಮೂಲಕ 619 ವಿಕೆಟ್‌ಗಳನ್ನು ಪಡೆದಿರುವ ಭಾರತದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಮೊದಲ ಸ್ಥಾನದಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಟ್ರಂಪ್ ಕಾರ್ಡ್ ಆಗಿರುವ ಅಶ್ವಿನ್ ಸದ್ಯ ಆಡುತ್ತಿರುವ ಆಟಗಾರರ ಪೈಕಿ ಎರಡನೇ ಅತ್ಯಧಿಕ ವಿಕೆಟ್ ಟೇಕರ್ ಆಗಿದ್ದಾರೆ. ಆಸ್ಟ್ರೇಲಿಯಾದ ನಾಥನ್ ಲಿಯಾನ್ 238 ಇನಿಂಗ್ಸ್ಗಳಿಂದ 517 ವಿಕೆಟ್ ಗಳಿಸಿದ್ದಾರೆ. ಅಶ್ವಿನ್ 97 ಪಂದ್ಯಗಳಲ್ಲಿ 499 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ. ಅಶ್ವಿನ್ ಈ ಸಾಧನೆ ಮಾಡಿದಲ್ಲಿ 500 ವಿಕೆಟ್ ಪಡೆದ ವಿಶ್ವದ 9ನೇ ಮತ್ತು ಭಾರತದ ಎರಡನೇ ಬೌಲರ್ ಆಗಲಿದ್ದಾರೆ.
ನನ್ನ ತವರಲ್ಲಿ ಅಶ್ವಿನ್ ದಾಖಲೆ:ಆರ್.ಅಶ್ವಿನ್ರ ದಾಖಲೆಯ ಇನಿಂಗ್ಸ್ಗೆ ಸಾಕ್ಷಿಯಾಗಲಿರುವ ರಾಜ್ಕೋಟ್ ಭಾರತ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾರ ತವರಾಗಿದೆ. ಕೇರಂ ಸ್ಪೆಷಲಿಸ್ಟ್ ತಮ್ಮ ವಿಶೇಷ ಸಾಧನೆಯನ್ನು ನನ್ನ ತವರಲ್ಲೇ ಮಾಡಲಿದ್ದಾರೆ ಎಂದು ಜಡೇಜಾ ಹೇಳಿದ್ದಾರೆ.
ಅಶ್ವಿನ್ ಅವರು ತಮ್ಮ 500 ಟೆಸ್ಟ್ ವಿಕೆಟ್‌ಗಳನ್ನು ಪೂರೈಸಲು ಕೇವಲ 1 ವಿಕೆಟ್ ಅಂತರದಲ್ಲಿದ್ದಾರೆ. ನಾನು ಅವರ ಬೌಲಿಂಗ್ಗಾಗಿ ಕಾಯುತ್ತಿದ್ದೇನೆ. ತವರು ಕ್ರೀಡಾಂಗಣವಾದ ರಾಜ್‌ಕೋಟ್‌ನಲ್ಲಿ ಈ ದಾಖಲೆ ನಿರ್ಮಾಣವಾಗುತ್ತಿರುವುದು ಸಂತಸದ ವಿಚಾರ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
ರಾಜ್‌ಕೋಟ್‌ನ ಅಶ್ವಿನ್ ಅವರು ಖಂಡಿತವಾಗಿಯೂ 500 ವಿಕೆಟ್‌ಗಳನ್ನು ಪೂರೈಸುತ್ತಾರೆ. ಕಳೆದ 12-13 ವರ್ಷಗಳಿಂದ ನಾನು ಅವರ ಜೊತೆಗೂಡಿ ಆಟವಾಡುತ್ತಿದ್ದೇನೆ. ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಗಳಿಸಿದ್ದು ದೊಡ್ಡ ಸಾಧನೆ. ಕಳೆದ ಪಂದ್ಯದಲ್ಲೇ ಈ ಸಾಧನೆ ಮಾಡಬೇಕಿತ್ತು. ಆದರೆ ದುರದೃಷ್ಟವಶಾತ್ ಅದು ಆಗಲಿಲ್ಲ. ಆದರೆ, ನನ್ನ ತವರು ರಾಜ್‌ಕೋಟ್‌ನಲ್ಲಿ ಅಶ್ವಿನ್ ಈ ಸಾಧನೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನೂ, 2ನೇ ಟೆಸ್ಟ್ನಲ್ಲಿ ಗಾಯಕ್ಕೀಡಾಗಿದ್ದ ಚೇತರಿಸಿಕೊಂಡಿದ್ದು, 3ನೇ ಪಂದ್ಯದಲ್ಲಿ ಆಡಲಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡಿರುವ ಕೆಎಲ್ ರಾಹುಲ್ 3ನೇ ಪಂದ್ಯದಿಂದ ತಪ್ಪಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:3ನೇ ಟೆಸ್ಟ್: ಹೊಸ ದಾಖಲೆಯ ಹೊಸ್ತಿಲಲ್ಲಿ ಅಶ್ವಿನ್, ಆ್ಯಂಡರ್ಸನ್